ಟೆಹರಾನ್ : ಹೊರ್ಮುಜ್ ಜಲಸಂಧಿಯಲ್ಲಿ ಇರಾನ್‌ನ 'ಮಸ್ಕಿಟೋ ಫ್ಲೀಟ್' (ಸೊಳ್ಳೆ ಪಡೆ) ಅಕ್ಷರಶಃ ಅಬ್ಬರಿಸಿ ಬೊಬ್ಬರಿಯುತ್ತಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಈ ಬೋಟ್ಗಳು ಅತೀವ ವೇಗದಲ್ಲಿ ಚಲಿಸುತ್ತವೆ. ಈ ಸಣ್ಣ ಬೋಟ್‌ಗಳ ಸ್ವರ್ಮ್ ಸ್ಟ್ರಾಟಜಿ ಅಂದರೆ, ಗುಂಪು ದಾಳಿ ತಂತ್ರವನ್ನು ಎದುರಿಸುವುದು ಬಲಿಷ್ಠ ರಾಷ್ಟ್ರಗಳಿಗೂ ಸವಾಲಾಗಿದೆ. ಜಾಗತಿಕ ತೈಲ ಪೂರೈಕೆಯ ಮಹಾದ್ವಾರವನ್ನೇ ಅಸ್ತವ್ಯಸ್ತಗೊಳಿಸುತ್ತಿರುವ ಈ ಸಣ್ಣ ಬೋಟ್ಗಳು, ಆಧುನಿಕ ಯುದ್ಧತಂತ್ರದ ದಿಕ್ಕನ್ನೇ ಬದಲಿಸುವ ಮೂಲಕ ಇಡೀ ವಿಶ್ವದ ಆರ್ಥಿಕತೆಗೆ ದೊಡ್ಡ ಭೀತಿಯಾಗಿ ಪರಿಣಮಿಸಿವೆ.
ಇರಾನಿನ ಯುದ್ಧನೌಕೆಗಳು, ಜಲಾಂತರ್ಗಾಮಿ ನೌಕೆಗಳು ಮತ್ತು ಮಿಲಿಟರಿ ತಾಣಗಳ ಮೇಲೆ ಸತತ ದಾಳಿಗಳನ್ನು ಮಾಡುವ ಮೂಲಕ ಆ ದೇಶದ ನೌಕಾಪಡೆಯನ್ನೇ ಸಂಪೂರ್ಣವಾಗಿ ನಾಶ ಮಾಡಿದ್ದೇವೆ ಎಂದು ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ. ಆದರೆ, ಜಾಗತಿಕ ತೈಲಕ್ಕೆ ನಿರ್ಣಾಯಕ ಹಾದಿಯಾಗಿರುವ ಹೊರ್ಮುಜ್ ಜಲಸಂಧಿಯಲ್ಲಿ ಹಡುಗುಗಳ ಸಂಚಾರಕ್ಕೆ ಅಡ್ಡಿಪಡಿಸುವುದನ್ನು ಇರಾನ್ ಮುಂದುವರೆಸಿದೆ. ತನ್ನ ನೌಕಾಪಡೆಯಲ್ಲಿ ಎಲ್ಲವೂ ನಾಶವಾಗಿರುವಾಗ ಹೊರ್ಮುಜ್ ಜಲಸಂಧಿಯನ್ನು ಅಡ್ಡಿಪಡಿಸಲು ಇರಾನ್ಗೆ ಹೇಗೆ ಸಾಧ್ಯವಾಯಿತು ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದಕ್ಕೆ ಉತ್ತರವೇ ಇರಾನಿನ ಸೊಳ್ಳೆ ಪಡೆ. ಇದು ಅಂತಿಂಥ ಪಡೆಯಲ್ಲ, ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸಿರುವ ಭಯಾನಕ ಪಡೆ. ಎದುರಾಳಿಗಳ ಅಂದಾಜಿಗೂ ಸಿಗದೇ ದಾಳಿ ಮಾಡುವುದೇ ಈ ಪಡೆಯ ತಂತ್ರ.
ಇರಾನಿನ "ಮಸ್ಕಿಟೊ ಫ್ಲೀಟ್" (ಸೊಳ್ಳೆ ಪಡೆ) ಎಂಬುದು ಸಾವಿರಾರು ಸಣ್ಣ ಮತ್ತು ಅತಿ ವೇಗದ ದೋಣಿಗಳ ಸಮೂಹವಾಗಿದೆ. ಈ ದೋಣಿಗಳು ಗಂಟೆಗೆ ಸುಮಾರು 40 ರಿಂದ 60 ನಾಟ್ಸ್ ವೇಗದಲ್ಲಿ ಚಲಿಸಬಲ್ಲವು ಮತ್ತು ಇವುಗಳ ಜೊತೆಗೆ ಡ್ರೋನ್‌ಗಳು ಹಾಗೂ ಕ್ಷಿಪಣಿಗಳ ಬೆಂಬಲವೂ ಇರುತ್ತದೆ. ಇವುಗಳಲ್ಲಿ ಮೆಷಿನ್ ಗನ್‌ಗಳು, ರಾಕೆಟ್‌ಗಳು ಮತ್ತು ಶತ್ರು ಹಡಗು ನಿರೋಧಕ ಕ್ಷಿಪಣಿಗಳಂತಹ ಶಸ್ತ್ರಾಸ್ತ್ರಗಳನ್ನು ಅಳವಡಿಸಲಾಗಿರುತ್ತದೆ. ಅಮೆರಿಕದ ಮಾಜಿ ರಕ್ಷಣಾ ಅಧಿಕಾರಿ ಅಲೆಕ್ಸ್ ಪ್ಲಿಟ್ಸಾಸ್ ಹೇಳುವಂತೆ, ಈ ದೋಣಿಗಳು ಸೊಳ್ಳೆಗಳಂತೆ ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಅತ್ಯಂತ ಕಿರಿಕಿರಿ ಉಂಟುಮಾಡುವ ಮತ್ತು ಶತ್ರುಗಳ ಮೇಲೆ ಅನಿರೀಕ್ಷಿತವಾಗಿ ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಆಳವಿಲ್ಲದ ಸಮುದ್ರ ಪ್ರದೇಶಗಳಲ್ಲಿ ಈ ವೇಗದ ಪಡೆಗಳು ದೊಡ್ಡ ಹಡಗುಗಳಿಗೆ ಸವಾಲೊಡ್ಡಬಲ್ಲವು ಎಂದು ವರದಿಯಾಗಿದೆ.