ಟೆಹ್ರಾನ್ : ದಶಕಗಳಿಂದ ನೆರೆಹೊರೆಯ ರಾಷ್ಟ್ರಗಳಾಗಿದ್ದರೂ ಶೀತಲ ಸಮರದ ಪರಿಸ್ಥಿತಿ ಎದುರಿಸುತ್ತಿದ್ದ ಇರಾನ್ ಮತ್ತು ಪಾಕಿಸ್ತಾನದ ಸಂಬಂಧ ಈಗ ಮತ್ತಷ್ಟು ಹದಗೆಟ್ಟಿದೆ. ಅಮೆರಿಕ ಮತ್ತು ಇರಾನ್ ನಡುವಿನ ಸಂಧಾನಕಾರನ ಪಾತ್ರ ವಹಿಸುತ್ತಿರುವ ಪಾಕಿಸ್ತಾನ, ವಾಸ್ತವದಲ್ಲಿ ಡಬಲ್ ಗೇಮ್ ಆಡುತ್ತಿದೆ ಎಂದು ಇರಾನ್ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ಬಹಿರಂಗವಾಗಿ ಕಿಡಿಕಾರಿವೆ. ಇರಾನ್ ಮೊದಲ ಬಾರಿಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರನ್ನೇ ಗುರಿಯಾಗಿಸಿಕೊಂಡು ಟೀಕೆ ಮಾಡಿರುವುದು ಜಾಗತಿಕ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಇತ್ತೀಚೆಗೆ ಇರಾನ್‌ನ ದೂರದರ್ಶನದಲ್ಲಿ ನಡೆದ ಚರ್ಚೆಯೊಂದರಲ್ಲಿ, ಪಾಕಿಸ್ತಾನದ ಮಧ್ಯಸ್ಥಿಕೆಯು ಕೇವಲ ಒಂದು ನಾಟಕ ಎಂದು ಇರಾನ್ ವಿಶ್ಲೇಷಕರು ಬಣ್ಣಿಸಿದ್ದಾರೆ. ಇರಾನ್ ಪ್ರಕಾರ, ಅಮೆರಿಕದೊಂದಿಗೆ ಮಾತುಕತೆ ನಡೆಸಲು ಇರಾನ್ ಒಂದು ಔಪಚಾರಿಕ ಪ್ರಸ್ತಾವನೆಯನ್ನು ಪಾಕಿಸ್ತಾನದ ಮೂಲಕ ವಾಷಿಂಗ್ಟನ್‌ಗೆ ರವಾನಿಸಿತ್ತು. ಆದರೆ, ಪಾಕ್ ಇರಾನ್‌ನ ಹಿತಾಸಕ್ತಿಯನ್ನು ಕಾಪಾಡುವ ಬದಲು ಅಮೆರಿಕದ ಪರವಾಗಿ ಕೆಲಸ ಮಾಡುತ್ತಿದೆ ಎಂಬುದು ಟೆಹ್ರಾನ್ ವಾದವಾಗಿದೆ. ಇರಾನ್ ಈ ಹಿಂದೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾಲದಲ್ಲೇ ಒಪ್ಪಿಕೊಳ್ಳಲಾಗಿದ್ದ 10-ಅಂಶಗಳನ್ನು ಮುಂದಿಟ್ಟುಕೊಂಡು ಮಾತುಕತೆಗೆ ಸಿದ್ಧವಾಗಿತ್ತು. ಆದರೆ ಈಗ ಪಾಕಿಸ್ತಾನವು ಆ ಅಂಶಗಳನ್ನು ಬದಿಗೊತ್ತಿ, ಅಮೆರಿಕದ ಹೊಸ 15 ರಿಂದ 16 ಕಠಿಣ ಬೇಡಿಕೆಗಳನ್ನು ಇರಾನ್ ಮೇಲೆ ಹೇರಲು ಪ್ರಯತ್ನಿಸುತ್ತಿದೆ ಎಂದು ಇರಾನ್ ಆರೋಪಿಸಿದೆ.
ಪಾಕಿಸ್ತಾನದ ಆಡಳಿತದಲ್ಲಿ ಸೇನೆಯೇ ಅಂತಿಮ ನಿರ್ಧಾರ ಕೈಗೊಳ್ಳುವ ಶಕ್ತಿ ಎಂಬುದು ಜಗತ್ತಿಗೇ ತಿಳಿದಿದೆ. ಇದನ್ನು ಮನಗಂಡ ಇರಾನ್ ಮಾಧ್ಯಮಗಳು, ಪಾಕಿಸ್ತಾನದ ಈ ಯು-ಟರ್ನ್ ನೀತಿಗೆ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರೇ ಕಾರಣ ಎಂದು ನೇರವಾಗಿ ಬೆರಳು ಮಾಡಿ ತೋರಿಸಿವೆ. ಪಾಕಿಸ್ತಾನವು ಅಮೆರಿಕದ ಆರ್ಥಿಕ ಸಹಾಯ ಮತ್ತು ಬೆಂಬಲಕ್ಕಾಗಿ ಇರಾನ್‌ನ ಚೌಕಾಶಿ ಸಾಮರ್ಥ್ಯವನ್ನು ಕುಂದಿಸುತ್ತಿದೆ ಎಂದು ತೇಹ್ರಾನ್ ವಾದಿಸುತ್ತಿದೆ. ಅತ್ತ ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಗಳು ಸಂಪೂರ್ಣವಾಗಿ ಹಳಿ ತಪ್ಪಿವೆ. ಅಮೆರಿಕವು ಇತ್ತೀಚೆಗೆ ಕದನ ವಿರಾಮವನ್ನು ಅನಿರ್ದಿಷ್ಟಾವಧಿಯವರೆಗೆ ವಿಸ್ತರಿಸಿದ್ದರೂ, ಇರಾನ್‌ನ ಬಂದರುಗಳ ಮೇಲೆ ಹೇರಲಾಗಿರುವ ನೌಕಾ ದಿಗ್ಬಂಧನವನ್ನು ಮಾತ್ರ ತೆರವುಗೊಳಿಸಿಲ್ಲ. ಇರಾನ್ ಇದನ್ನು ಯುದ್ಧದ ಘೋಷಣೆ ಎಂದು ಕರೆದಿದೆ.