image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಟ್ರಂಪ್ ಮತ್ತು ಪಾಕ್ ಸೇನಾ ಮುಖ್ಯಸ್ಥರ 'ದೋಸ್ತಿ' ಮೇಲೆ ಅಮೆರಿಕ ಗುಪ್ತಚರ ಇಲಾಖೆ ಕಣ್ಣು

ಟ್ರಂಪ್ ಮತ್ತು ಪಾಕ್ ಸೇನಾ ಮುಖ್ಯಸ್ಥರ 'ದೋಸ್ತಿ' ಮೇಲೆ ಅಮೆರಿಕ ಗುಪ್ತಚರ ಇಲಾಖೆ ಕಣ್ಣು

ವಾಷಿಂಗ್ಟನ್ : ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಉಲ್ಬಣಗೊಂಡ ನಂತರ ಟೆಹ್ರಾನ್‌ಗೆ ಭೇಟಿ ನೀಡಿದ ಮೊದಲ ವಿದೇಶಿ ನಾಯಕ ಎಂಬ ಹೆಗ್ಗಳಿಕೆಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಪಾತ್ರರಾಗಿದ್ದಾರೆ. ಆದರೆ, ಈ ಭೇಟಿಯು ಶಾಂತಿಗಾಗಿ ನಡೆದ ಪ್ರಯತ್ನವೋ ಅಥವಾ ಅಮೆರಿಕಕ್ಕೆ ನೀಡುತ್ತಿರುವ ಎಚ್ಚರಿಕೆಯೋ ಎಂಬ ಚರ್ಚೆ ಈಗ ಶುರುವಾಗಿದೆ. ವರದಿಯ ಪ್ರಕಾರ, ಮುನೀರ್ ಅವರು ಕೇವಲ ರಾಜತಾಂತ್ರಿಕ ಅಧಿಕಾರಿಯಲ್ಲ. ಅವರು 2016-17ರಲ್ಲಿ ಪಾಕಿಸ್ತಾನದ ಮಿಲಿಟರಿ ಗುಪ್ತಚರ ಮುಖ್ಯಸ್ಥರಾಗಿದ್ದ ಕಾಲದಿಂದಲೂ ಇರಾನ್‌ನ ಅತ್ಯಂತ ಪ್ರಭಾವಶಾಲಿ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ (IRGC) ನೊಂದಿಗೆ ಆಳವಾದ ಸಂಬಂಧ ಹೊಂದಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ದಾಳಿಯಲ್ಲಿ ಕೊಲ್ಲಲ್ಪಟ್ಟ ಇರಾನ್‌ನ ಪ್ರಮುಖ ಕಮಾಂಡರ್‌ಗಳಾದ ಖಾಸಿಮ್ ಸೊಲೈಮಾನಿ ಮತ್ತು ಹೊಸೈನ್ ಸಲಾಮಿ ಅವರೊಂದಿಗೆ ಮುನೀರ್ ವೈಯಕ್ತಿಕ ಸ್ನೇಹ ಹೊಂದಿದ್ದರು ಎಂಬುದು ಈಗ ಬಯಲಾಗಿದೆ. ಮುನೀರ್ ಅವರ ಈ ಹಿನ್ನೆಲೆಯು ಅಮೆರಿಕದ ಭದ್ರತಾ ತಜ್ಞರಲ್ಲಿ ಆತಂಕ ಮೂಡಿಸಿದೆ. ‘ಫೌಂಡೇಶನ್ ಫಾರ್ ಡಿಫೆನ್ಸ್ ಆಫ್ ಡೆಮಾಕ್ರಸೀಸ್’ನ ಬಿಲ್ ರೊಗ್ಗಿಯೊ ಅವರು ಟ್ರಂಪ್ ಆಡಳಿತಕ್ಕೆ ಕಠಿಣ ಸಂದೇಶ ನೀಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನವು ನಮ್ಮ ಮಿತ್ರನಂತೆ ನಟಿಸಿ ತಾಲಿಬಾನ್‌ಗೆ ಬೆಂಬಲ ನೀಡಿದ ವಿಶ್ವಾಸಘಾತುಕ ಇತಿಹಾಸ ಹೊಂದಿದೆ. ಈಗ ಐಆರ್‌ಜಿಸಿ (IRGC) ಜೊತೆ ಮುನೀರ್ ಹೊಂದಿರುವ ನಿಕಟ ಸಂಬಂಧಗಳು ಟ್ರಂಪ್ ಆಡಳಿತಕ್ಕೆ ಮುಂದೊಂದು ದಿನ ದೊಡ್ಡ ಹೊಡೆತ ನೀಡಬಹುದು ಎಂದು ಹೇಳಿದ್ದಾರೆ.

ರಾಜಕೀಯ ವಿಶ್ಲೇಷಕ ರಜಾ ರೂಮಿ ಅವರ ಪ್ರಕಾರ, ಮುನೀರ್ ಅವರಂತಹ ವ್ಯಕ್ತಿಗಳ ಪ್ರಭಾವವು ಪಾಕಿಸ್ತಾನದ ನಾಗರಿಕ ಸರ್ಕಾರವನ್ನು ಮಿಲಿಟರಿ ಹೇಗೆ ಸಂಪೂರ್ಣವಾಗಿ ಮರೆಮಾಡುತ್ತಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ವಿದೇಶಾಂಗ ನೀತಿಯ ನಿರ್ಧಾರಗಳನ್ನು ಚುನಾಯಿತ ನಾಯಕರಿಗಿಂತ ಹೆಚ್ಚಾಗಿ ಸೇನಾ ಮುಖ್ಯಸ್ಥರೇ ತೆಗೆದುಕೊಳ್ಳುತ್ತಿರುವುದು ಪಾಕ್ ಪ್ರಜಾಪ್ರಭುತ್ವದ ಅಸಹಾಯಕತೆಯನ್ನು ತೋರಿಸುತ್ತಿದೆ. ಶನಿವಾರವಷ್ಟೇ ಇರಾನ್‌ನ ಮೂರು ದಿನಗಳ ಭೇಟಿ ಮುಗಿಸಿದ ಮುನೀರ್, ಅಲ್ಲಿನ ಅಧ್ಯಕ್ಷರು ಮತ್ತು ಮಿಲಿಟರಿ ಮುಖ್ಯಸ್ಥರೊಂದಿಗೆ ಶಾಂತಿ ಒಪ್ಪಂದದ ಬಗ್ಗೆ ಚರ್ಚಿಸಿದ್ದಾರೆ. ಇದರ ಬೆನ್ನಲ್ಲೇ ಈ ವಾರ ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಎರಡನೇ ಸುತ್ತಿನ ಮಾತುಕತೆ ನಡೆಯುವ ನಿರೀಕ್ಷೆಯಿದೆ. ಈ ಮಾತುಕತೆಯಲ್ಲಿ ಮುನೀರ್ ಅವರೇ ‘ಸೂತ್ರಧಾರ’ನ ಪಾತ್ರ ವಹಿಸುತ್ತಿರುವುದು ಜಾಗತಿಕ ರಾಜಕೀಯದ ಕುತೂಹಲಕಾರಿ ಬೆಳವಣಿಗೆಯಾಗಿದೆ. ಒಂದೆಡೆ ಟ್ರಂಪ್ ಅವರೊಂದಿಗೆ ಸ್ನೇಹ ಪ್ರದರ್ಶಿಸುತ್ತಲೇ, ಮತ್ತೊಂದೆಡೆ ಅಮೆರಿಕದ ಬದ್ಧ ವೈರಿ ಇರಾನ್‌ನ ಮಿಲಿಟರಿ ನಾಯಕರೊಂದಿಗೆ ‘ವೈಯಕ್ತಿಕ ಸಮೀಕರಣ’ ಹೊಂದಿರುವ ಆಸಿಮ್ ಮುನೀರ್ ಅವರ ನಡೆ ಅಮೆರಿಕದ ಭದ್ರತೆಗೆ ಸವಾಲಾಗಬಹುದು. ಪಾಕಿಸ್ತಾನದ ಈ ‘ದ್ವಂದ್ವ ನೀತಿ’ಯನ್ನು ಟ್ರಂಪ್ ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ದಕ್ಷಿಣ ಏಷ್ಯಾದ ಭವಿಷ್ಯ ನಿಂತಿದೆ.

Category
ಕರಾವಳಿ ತರಂಗಿಣಿ