ಇಸ್ಲಾಮಬಾದ್ : ನಾವು ಟೆಹ್ರಾನ್‌ಗೆ ಅಂತಿಮ ಮತ್ತು ಅತ್ಯುತ್ತಮ ಆಫರ್ ನೀಡಿದ್ದೇವೆ. ಈಗ ಮಾತುಕತೆಯಿಂದ ಹೊರನಡೆಯುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು. ಇರಾನ್ ಯಾವುದೇ ಕಾರಣಕ್ಕೂ ಅಣ್ವಸ್ತ್ರ ಅಭಿವೃದ್ಧಿಪಡಿಸುವುದಿಲ್ಲ ಎಂಬ ಮೂಲಭೂತ ಬದ್ಧತೆ"ಯನ್ನು ಅಮೆರಿಕ ಬಯಸುತ್ತಿದೆ. ಆದರೆ, ಅಂತಹ ಬದ್ಧತೆ ನಮಗೆ ಇರಾನ್ ಕಡೆಯಿಂದ ಕಾಣಿಸಲಿಲ್ಲ ಎಂದು ವ್ಯಾನ್ಸ್ ಹೇಳಿದರು. 1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಉಭಯ ದೇಶಗಳ ನಡುವೆ ನಡೆದ ಅತ್ಯುನ್ನತ ಮಟ್ಟದ ಸಭೆ ಇದಾಗಿತ್ತು. ಆದರೂ, ಅಮೆರಿಕದ ಆಫರ್ ಬಗ್ಗೆ ಯೋಚಿಸಲು ಇರಾನ್‌ಗೆ ಇನ್ನೂ ಸಮಯವಿದೆ ಎಂಬ ಸೂಚನೆಯನ್ನು ವ್ಯಾನ್ಸ್ ನೀಡಿದ್ದಾರೆ. ಮಾತುಕತೆ ಹಿನ್ನೆಲೆಯಲ್ಲಿ ಅಮೆರಿಕವು ಇಸ್ರೇಲ್ ಜೊತೆಗೂಡಿ ನಡೆಸುತ್ತಿದ್ದ ದಾಳಿಯನ್ನು ಎರಡು ವಾರಗಳ ಕಾಲ ನಿಲ್ಲಿಸುವುದಾಗಿ ಮಂಗಳವಾರ ಹೇಳಿತ್ತು. ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್, ಇರಾನ್ ಮೇಲೆ ದಾಳಿ ಮಾಡಿದ್ದವು. ಇದಕ್ಕೆ ಪ್ರತಿಯಾಗಿ ಟೆಹ್ರಾನ್ ಕೂಡ ಪ್ರತೀಕಾರ ತೀರಿಸಿಕೊಂಡಿತ್ತು. ಇದರಿಂದಾಗಿ ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿ, ಜಾಗತಿಕ ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಬೀರಿತ್ತು. ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆದ ಈ ಮಾತುಕತೆಯಲ್ಲಿ ಇರಾನ್ ಮತ್ತು ಅಮೆರಿಕ ಎರಡೂ ತಮ್ಮ ಕಠಿಣ ನಿಲುವುಗಳಿಗೆ ಅಂಟಿಕೊಂಡಿದ್ದವು. ಮಾತುಕತೆ ನಡೆಯುತ್ತಿರುವಾಗಲೇ, ಹಾರ್ಮುಜ್ ಜಲಸಂಧಿಯ ಮೂಲಕ ಅಮೆರಿಕ ತನ್ನ ಮೈನ್‌ಸ್ವೀಪಿಂಗ್ ಹಡಗುಗಳನ್ನು ಕಳುಹಿಸಿದೆ ಎಂದು ಹೇಳಿ ಒತ್ತಡ ಹೇರುವ ತಂತ್ರ ಅನುಸರಿಸಿತ್ತು.
ವಿಶ್ವದ ಐದನೇ ಒಂದು ಭಾಗದಷ್ಟು ತೈಲ ಸಾಗಾಟವಾಗುವ ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ಅಮೆರಿಕ ವಿಪರೀತ ಬೇಡಿಕೆಗಳನ್ನು ಇಡುತ್ತಿದೆ ಎಂದು ಇರಾನ್ ಮಾಧ್ಯಮಗಳು ಆರೋಪಿಸಿದಾಗ ಮಾತುಕತೆಯಲ್ಲಿ ಬಿರುಕು ಕಾಣಿಸಿಕೊಂಡಿತು. ಇನ್ನೊಂದೆಡೆ, ಮಾತುಕತೆ ಆರಂಭವಾಗಿ ಹಲವು ಗಂಟೆಗಳ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಾತುಕತೆಯ ಫಲಿತಾಂಶದ ಬಗ್ಗೆ ತಮಗೆ ಯಾವುದೇ ಆಸಕ್ತಿಯಿಲ್ಲ ಎಂದು ಹೇಳಿಕೆ ನೀಡಿದ್ದರು. ಬದಲಾಗಿ, ಇರಾನ್‌ನ ನಾಯಕರನ್ನು ಹತ್ಯೆಗೈದು ಮತ್ತು ಪ್ರಮುಖ ಮಿಲಿಟರಿ ಮೂಲಸೌಕರ್ಯಗಳನ್ನು ನಾಶಪಡಿಸುವ ಮೂಲಕ ಅಮೆರಿಕ ಈಗಾಗಲೇ ಯುದ್ಧಭೂಮಿಯಲ್ಲಿ ಗೆದ್ದಿದೆ ಎಂದು ಟ್ರಂಪ್ ವಾದಿಸಿದರು. 'ನಾವು ಒಪ್ಪಂದ ಮಾಡಿಕೊಂಡರೂ ಒಂದೇ, ಬಿಟ್ಟರೂ ಒಂದೇ. ಯಾಕೆಂದರೆ ನಾವು ಈಗಾಗಲೇ ಯುದ್ಧ ಗೆದ್ದಾಗಿದೆ' ಎಂದು ಟ್ರಂಪ್ ಹೇಳಿದ್ದರು. ಅಂತಿಮವಾಗಿ, 21 ಗಂಟೆಗಳ ಮಾತುಕತೆಯ ನಂತರ ಯಾವುದೇ ಒಪ್ಪಂದ ಸಾಧ್ಯವಾಗಿಲ್ಲ ಎಂದು ವ್ಯಾನ್ಸ್ ವರದಿಗಾರರಿಗೆ ತಿಳಿಸಿದರು. ನಾವು ಇಲ್ಲಿಂದ ಹೊರಡುವಾಗ ಒಂದು ಸರಳ ಪ್ರಸ್ತಾಪವನ್ನು ಇಟ್ಟಿದ್ದೇವೆ. ಇದು ನಮ್ಮ ಅಂತಿಮ ಮತ್ತು ಅತ್ಯುತ್ತಮ ಆಫರ್. ಇರಾನಿಯನ್ನರು ಇದನ್ನು ಒಪ್ಪಿಕೊಳ್ಳುತ್ತಾರೆಯೇ ಎಂದು ನೋಡೋಣ ಎಂದು ಅವರು ಹೇಳಿದರು.