ಇಸ್ಲಾಮಾಬಾದ್ : ಮಧ್ಯಪ್ರಾಚ್ಯ ಸಂಘರ್ಷದಲ್ಲಿ ದುರ್ಬಲವಾದ ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ ಸ್ಥಿರಗೊಳಿಸುವ ಪ್ರಯತ್ನಗಳು ತೀವ್ರಗೊಳ್ಳುತ್ತಿದ್ದಂತೆ, ಅಮೆರಿಕದೊಂದಿಗೆ ನಿರ್ಣಾಯಕ ಶಾಂತಿ ಮಾತುಕತೆಗಾಗಿ, ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಖಲೀಬಾಫ್ ಮತ್ತು ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ನೇತೃತ್ವದ ಉನ್ನತ ಮಟ್ಟದ ಇರಾನ್ ನಿಯೋಗವು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ಗೆ ಆಗಮಿಸಿದೆ. ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್, ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ಸರ್ದಾರ್ ಅಯಾಜ್ ಸಾದಿಕ್, ರಕ್ಷಣಾ ಪಡೆ ಮುಖ್ಯಸ್ಥ (ಸಿಡಿಎಫ್) ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಮತ್ತು ಆಂತರಿಕ ಸಚಿವ ಮೊಹ್ಸಿನ್ ನಖ್ವಿ, ಇರಾನ್ ನಿಯೋಗವನ್ನು ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು. ಅಮೆರಿಕ ಮತ್ತು ಇರಾನ್ ನಡುವೆ ರಚನಾತ್ಮಕ ಮಾತುಕತೆಗಳ ಬಗ್ಗೆ ಭರವಸೆ ವ್ಯಕ್ತಪಡಿಸಿರುವ ಪಾಕಿಸ್ತಾನ ವಿದೇಶಾಂಗ ಇಲಾಖೆ, "ಶಾಶ್ವತ ಮತ್ತು ದೀರ್ಘಕಾಲ ಚಾಲ್ತಿಯಲ್ಲಿರುವ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು" ಎಂದು ಭರವಸೆ ನೀಡಿದೆ. ಇರಾನ್ ನಿಯೋಗ ಸದ್ಯದಲ್ಲೇ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನೇತೃತ್ವದ ಅಮೆರಿಕದ ನಿಯೋಗವನ್ನು ಭೇಟಿ ಮಾಡಲಿದೆ.
ನಿನ್ನೆ ಸಂಜೆಯೇ ನೂರ್ ಖಾನ್ ಏರ್‌ಬೇಸ್‌ಗೆ ಅಮೆರಿಕದ ನಿಯೋಗ ಹೊತ್ತ ಮಿಲಿಟರಿ ವಿಮಾನ ಬಂದಿಳಿದಿದೆ. ಈಗಾಗಲೇ ಇಸ್ಲಾಮಾಬಾದ್ ತಲುಪಿದ್ದು, ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪ್ರತ್ಯೇಕ ವಿಮಾನದಲ್ಲಿ ಇಸ್ಲಾಮಾಬಾದ್ ತಲುಪಿದ್ದಾರೆ. ಪಾಕಿಸ್ತಾನದ ಮಿಲಿಟರಿ ಇಸ್ಲಾಮಾಬಾದ್‌ನ್ನು ಭದ್ರಕೋಟೆಯನ್ನಾಗಿ ಪರಿವರ್ತಿಸಿದ್ದು, ಭಾರೀ ಬಂದೋಬಸ್ತ್ ಏರ್ಪಡಿಸಿದೆ. ಇರಾನ್ ಮಾತುಕತೆಯಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದರೂ, ಹಲವು ಪೂರ್ವಷರತ್ತಿಗಳನ್ನು ಮುಂದಿಟ್ಟಿದೆ. ಈ ಪೈಕಿ ಔಪಚಾರಿಕ ಮಾತುಕತೆಗಳು ಮುಂದುವರಿಯುವ ಮೊದಲು, ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ವಿರುದ್ಧದ ಕಾರ್ಯಾಚರಣೆಯನ್ನು
ಇಸ್ರೇಲ್ ನಿಲ್ಲಿಸಬೇಕು ಎಂದು ಇರಾನ್ ಒತ್ತಾಯಿಸಿದೆ. ಇಸ್ಲಾಮಾಬಾದ್ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಮೊಹಮ್ಮದ್ ಬಘರ್ ಖಲೀಬಾಫ್, ಅಮೆರಿಕದ ಮೇಲಿನ ಇರಾನ್ ಅಪನಂಬಿಕೆಯನ್ನು ಪುನರುಚ್ಚರಿಸಿದ್ದಾರೆ. "ಅಮೆರಿಕನ್ನರೊಂದಿಗಿನ ನಮ್ಮ ಮಾತುಕತೆಗಳ ಅನುಭವವು ಯಾವಾಗಲೂ ವೈಫಲ್ಯ ಮತ್ತು ಭರವಸೆಯ ಉಲ್ಲಂಘನೆಯನ್ನು ಎದುರಿಸಿದೆ. ನಮಗೆ ಸದ್ಭಾವನೆ ಇದೆ ಆದರೆ ನಂಬಿಕೆ ಇಲ್ಲ" ಎಂದು ಖಲೀಬಾಫ್ ಹೇಳಿದ್ದಾರೆ.
ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕೂಡ ಮಾತುಕತೆಗಳ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ "ಇರಾನ್ ತಮ್ಮ ಷರತ್ತುಗಳಿಗೆ ಒಪ್ಪಿಗೆ ನೀಡದಿದ್ದರೆ, ನಾವು ಮಾತುಕತೆಯನ್ನು ಮುರಿದುಕೊಳ್ಳಲು ಹಿಂಜರಿಯುವುದಿಲ್ಲ" ಎಂದು ಜೆಡಿ ವ್ಯಾನ್ಸ್ ಸ್ಪಷ್ಟಪಡಿಸಿದ್ದಾರೆ. ಅಮೆರಿಕ ಮತ್ತು ಇರಾನ್ ಎರಡೂ ಪರಸ್ಪರ ಪೂರ್ಣ ನಂಬಿಕೆಯಿಲ್ಲದೇ ಮಾತುಕತೆಯಲ್ಲಿ ತೊಡಗಿರುವುದು ಸ್ಪಷ್ಟ. ಇತ್ತ ಭಾರತ ಈ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಭಾರತವು ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದವನ್ನು ಸ್ವಾಗತಿಸಿದೆ. ಕಾಂಗ್ರೆಸ್ ಸಂಸದ ಶಶಿ ತರೂರ್ ಅಮೆರಿಕ-ಇರಾನ್ ನಡುವೆ ಪಾಕಿಸ್ತಾನದ ಮಧ್ಯಸ್ಥಿಕೆಗೆ ಮೆಚ್ಚುಗೆ ಸೂಚಿಸಿದ್ದಾರೆ. "ಯಾರ ಪ್ರಯತ್ನದಿಂದಾದರೂ ಸರಿ, ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಗೊಂಡರೆ ಸಾಕು" ಎಂಬ ಅವರ ಹೇಳಿಕೆ ಇದೀಗ ಭಾರೀ ಚರ್ಚೆಗೆ ಒಳಪಟ್ಟಿದೆ.