ಟೆಹ್ರಾನ್ : ಎರಡು ವಾರಗಳ ಕದನ ವಿರಾಮಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಗೆ ಕೊಡುತ್ತಿದ್ದಂತೆ ಇತ್ತ ಇರಾನ್ ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಅನುಮತಿ ನೀಡಿದ್ದು, ಇರಾನ್ನಿಂದ ತೈಲ ಸಾಗಾಟ ಸುಗಮವಾಗಲಿದೆ. ಭಾರತ ಸೇರಿ ಅನೇಕ ದೇಶಗಳಿಗೆ ಇದರಿಂದ ಅನುಕೂಲವಾಗಲಿದೆ. ಇರಾನ್ ಮೇಲಿನ ದಾಳಿಯನ್ನು ಎರಡು ವಾರಗಳ ಕಾಲ ಮುಂದೂಡಲು ಅಮೆರಿಕ ಅಧ್ಯಕ್ಷ ಟ್ರಂಪ್ ನಿರ್ಧರಿಸಿದ್ದು, ಜಾಗತಿಕ ಮಾರುಕಟ್ಟೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಘೋಷಣೆಯ ನಂತರ, ಕಚ್ಚಾ ತೈಲ ಬೆಲೆಗಳು ತೀವ್ರವಾಗಿ ಕುಸಿದಿವೆ ಮತ್ತು ಅಮೆರಿಕದ ಷೇರುಗಳು ಏರಿಕೆಯಾಗಿವೆ. ಇರಾನ್ ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳನ್ನು ಸುರಕ್ಷಿತವಾಗಿ ಹಾದುಹೋಗಲು ಅನುಮತಿಸಿದರೆ ಮಿಲಿಟರಿ ಕ್ರಮವನ್ನು ನಿಲ್ಲಿಸಬಹುದು ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದರು. ಇದೀಗ ಇರಾನ್ ಅದಕ್ಕೆ ಒಪ್ಪಿಕೊಂಡಿದೆ. ಹಾರ್ಮುಜ್ ಜಲಸಂಧಿಯನ್ನು ಎರಡು ವಾರಗಳ ಅವಧಿಗೆ ತೆರೆಯಲಾಗುವುದು ಎಂದು ಅರಾಘ್ಚಿ ಘೋಷಿಸಿದ್ದಾರೆ. ಯುಎಸ್ ಕಚ್ಚಾ ತೈಲ ಬೆಲೆಗಳು ಸುಮಾರು ಶೇ. 18 ರಷ್ಟು ಇಳಿದು ಪ್ರತಿ ಬ್ಯಾರೆಲ್‌ಗೆ 92.60 ಡಾಲರ್ಗೆ ಕ್ಕೆ ತಲುಪಿದರೆ, ಬ್ರೆಂಟ್ ಕಚ್ಚಾ ತೈಲ ಬೆಲೆಗಳು ಸುಮಾರು ಶೇ.6 ರಷ್ಟು ಇಳಿದು ಪ್ರತಿ ಬ್ಯಾರೆಲ್‌ಗೆ 103.40 ಡಾಲರ್ಗೆ ತಲುಪಿವೆ. ಅಮೆರಿಕದ ಷೇರು ಮಾರುಕಟ್ಟೆಗಳು ಏರಿಕೆಯಾಗಿದ್ದು, ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಿವೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಮುಖ ಘೋಷಣೆ ಮಾಡಿದ್ದು, ಇರಾನ್ ಮೇಲಿನ ಸಂಭಾವ್ಯ ದಾಳಿಗಳು ಮತ್ತು ಬಾಂಬ್ ದಾಳಿಗಳನ್ನು ಎರಡು ವಾರಗಳ ಕಾಲ ನಿಲ್ಲಿಸಲಾಗಿದೆ ಎಂದು ಹೇಳಿದ್ದಾರೆ. ಇದು ದ್ವಿಪಕ್ಷೀಯ ಕದನ ವಿರಾಮ ಎಂದು ಟ್ರಂಪ್ ಹೇಳಿದ್ದಾರೆ.
ಅಂದರೆ ಈ ಅವಧಿಯಲ್ಲಿ ಅಮೆರಿಕ ಅಥವಾ ಇರಾನ್ ಯಾವುದೇ ಆಕ್ರಮಣಕಾರಿ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ.ಈ ಒಪ್ಪಂದಕ್ಕೆ ಒಂದು ಮಹತ್ವದ ಷರತ್ತು ವಿಧಿಸಲಾಗಿದೆ: ಇರಾನ್ ತಕ್ಷಣವೇ, ಸಂಪೂರ್ಣವಾಗಿ ಮತ್ತು ಸುರಕ್ಷಿತವಾಗಿ ಹಾರ್ಮುಜ್ ಜಲಸಂಧಿಯನ್ನು ತೆರೆಯಬೇಕು. ಕದನ ವಿರಾಮಕ್ಕೆ ಪಾಕಿಸ್ತಾನದ ಪ್ರಯತ್ನಗಳಿಗೆ ಅಬ್ಬಾಸ್ ಅರಘ್ಚಿ ಕೃತಜ್ಞತೆ ಸಲ್ಲಿಸಿದರು ಮತ್ತು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರನ್ನು ಶ್ಲಾಘಿಸಿದರು. ಇರಾನ್‌ಗೆ ನೀಡಿದ್ದ 48 ಗಂಟೆಗಳ ಡೆಡ್‌ಲೈನ್ ಅಮೆರಿಕ ಕಾಲಮಾನ ರಾತ್ರಿ 8 ಗಂಟೆಗೆ ಅಂತ್ಯವಾಗುವ ಒಂದು ಗಂಟೆಯ ಮೊದಲು ಟ್ರಂಪ್ ತಮ್ಮ ಟ್ರೂಥ್ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ಇಂದು ರಾತ್ರಿ ಇರಾನ್‌ಗೆ ಕಳುಹಿಸಲಾಗುತ್ತಿರುವ ವಿನಾಶಕಾರಿ ಪಡೆಗಳನ್ನು ತಡೆಹಿಡಿಯುವಂತೆ ಮನವಿ ಮಾಡಿದರು. ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಈ ಕೂಡಲೇ ತೆರೆಯಲು ಒಪ್ಪಿಕೊಂಡರೆ ಇರಾನ್ ಮೇಲೆ ಮಾಡಲು ಉದ್ದೇಶಿಸಿರುವ ಬಾಂಬ್ ದಾಳಿಯನ್ನು ಎರಡು ವಾರಗಳ ಕಾಲ ತಡೆ ಹಿಡಿಯಲು ಒಪ್ಪಿಗೆ ನೀಡುತ್ತೇನೆ. ಇದು ದ್ವಿಪಕ್ಷೀಯ ಕದನ ವಿರಾಮ ಆಗಲಿದೆ ಎಂದಿದ್ದಾರೆ.