ಅಬುಧಾಬಿ : ಅಮೇರಿಕ ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಭೀಕರ ಸಂಘರ್ಷವನ್ನು ಶಮನ ಮಾಡಲು ಮಧ್ಯಸ್ಥಿಕೆ ವಹಿಸಲು ಮುಂದಾಗಿದ್ದ ಪಾಕಿಸ್ತಾನಕ್ಕೆ ಇದೀಗ ತೀವ್ರ ಮುಖಭಂಗವಾಗಿದೆ. ಒಂದೆಡೆ ಜಗತ್ತಿಗೆ ಶಾಂತಿಪಾಠ ಮಾಡಲು ಹೊರಟಿದ್ದ ಪಾಕಿಸ್ತಾನಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಭಾರೀ ಆಘಾತ ನೀಡಿದ್ದು, ತಕ್ಷಣವೇ ತನ್ನ ಸಾಲವನ್ನು ಮರುಪಾವತಿ ಮಾಡುವಂತೆ ಕುತ್ತಿಗೆಗೆ ಕೈಹಾಕಿದೆ. ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಈಗಾಗಲೇ ದಿವಾಳಿಯಂಚಿನಲ್ಲಿದೆ. ಇಂತಹ ಸಮಯದಲ್ಲಿ ಯುಎಇ ನೀಡಿರುವ ಈ ಎಚ್ಚರಿಕೆ ಪಾಕ್ ಪ್ರಧಾನಿ ಮತ್ತು ಸೇನೆಗೆ ನಿದ್ದೆಗೆಡಿಸಿದೆ. ವರದಿಗಳ ಪ್ರಕಾರ, ಏಪ್ರಿಲ್ 17ರ ಒಳಗೆ ಸಾಲದ ಮೊತ್ತವನ್ನು ಸಂಪೂರ್ಣವಾಗಿ ಹಿಂದಿರುಗಿಸುವಂತೆ ಯುಎಇ ಸ್ಪಷ್ಟ ಸೂಚನೆ ನೀಡಿದೆ.
ಕೇವಲ ಸಾಲ ವಾಪಸ್ ಕೇಳಿದ್ದಲ್ಲದೆ, ಪಾಕಿಸ್ತಾನಕ್ಕೆ ವಿಧಿಸಲಾಗುತ್ತಿದ್ದ ಬಡ್ಡಿ ದರವನ್ನು ಯುಎಇ ದಿಢೀರ್ ಆಗಿ ಹೆಚ್ಚಿಸಿದೆ. 2018ರಲ್ಲಿ ಪಾಕಿಸ್ತಾನದ ಆರ್ಥಿಕ ಸಂಕಷ್ಟವನ್ನು ತಪ್ಪಿಸಲು ಯುಎಇ 2 ಬಿಲಿಯನ್ ಡಾಲರ್ ಮೊತ್ತದ ಬೃಹತ್ ಸಾಲವನ್ನು ನೀಡಿತ್ತು. ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಮಾಹಿತಿಯ ಪ್ರಕಾರ, ಈ ಹಿಂದೆ ಈ ಸಾಲಕ್ಕೆ ಯುಎಇ ಶೇಕಡಾ 3ರಷ್ಟು ಬಡ್ಡಿ ವಿಧಿಸುತ್ತಿತ್ತು. ಇದರಿಂದ ಪಾಕಿಸ್ತಾನ ಪ್ರತಿ ವರ್ಷ 130 ಮಿಲಿಯನ್ ಡಾಲರ್ ಬಡ್ಡಿ ಕಟ್ಟುತ್ತಿತ್ತು. ಆದರೆ ಇದೀಗ ಯುಎಇ ಈ ಬಡ್ಡಿ ದರವನ್ನು ಶೇಕಡಾ 6.5ಕ್ಕೆ ಏರಿಕೆ ಮಾಡಿದೆ. ಇದು ಪಾಕಿಸ್ತಾನದ ಬೊಕ್ಕಸಕ್ಕೆ ಬೃಹತ್ ಹೊಡೆತ ನೀಡಿದೆ. ಕೇವಲ ಎರಡು ತಿಂಗಳ ಠೇವಣಿ ಅವಧಿ ವಿಸ್ತರಣೆಗೆ ಒಪ್ಪಿದ್ದ ಯುಎಇ ಇದೀಗ ಏಪ್ರಿಲ್ 17ರ ಅಂತಿಮ ಗಡುವು ವಿಧಿಸಿದೆ.
ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧವನ್ನು ನಿಲ್ಲಿಸುವ ನೆಪದಲ್ಲಿ ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಹವಣಿಸುತ್ತಿತ್ತು. ಇದಕ್ಕಾಗಿ ಈಜಿಪ್ಟ್, ಟರ್ಕಿ ಸೇರಿದಂತೆ ಹಲವು ಪ್ರಭಾವಿ ರಾಷ್ಟ್ರಗಳ ನಾಯಕರೊಂದಿಗೆ ಪಾಕ್ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದರು. ಆದರೆ ತಮ್ಮದೇ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಮಿತಿಮೀರಿದ್ದರೂ ಬೇರೆ ದೇಶಗಳ ಯುದ್ಧ ನಿಲ್ಲಿಸಲು ಹೋದ ಪಾಕಿಸ್ತಾನದ ನಡೆಯನ್ನು ಗಮನಿಸಿದ ಯುಎಇ, ಮೊದಲು ನಮ್ಮ ಹಣ ಕೊಡಿ ಆಮೇಲೆ ಜಗತ್ತಿನ ಉದ್ಧಾರ ಮಾಡಿ ಎಂಬ ಸ್ಪಷ್ಟ ಸಂದೇಶ ರವಾನಿಸಿದೆ.