ಇಸ್ಲಾಮಾಬಾದ್ : ಕಾಶ್ಮೀರದಲ್ಲಿನ ಅಸಹಾಯಕ ಮುಸ್ಲಿಂ ಮಹಿಳೆಯರನ್ನು ಪಾಕ್ ಉಗ್ರಗಾಮಿಗಳು ಲೈಂಗಿಕವಾಗಿ ಶೋಷಿಸುತ್ತಿದ್ದಾರೆ ಎಂದು ಪಾಕಿಸ್ತಾನದ ಧಾರ್ಮಿಕ ಮುಖಂಡ ಹೇಳಿದ್ದಾರೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆಪ್ತ ಹಾಗೂ ಪ್ರಭಾವಿ ದಿಯೋಬಂದಿ ಧರ್ಮಗುರು ಮುಫಿ ಸಯೀದ್ ಖಾನ್ ಅವರು ಈ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಮುಪ್ತಿ ಸಯೀದ್ ಖಾನ್, ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳು ಕಾಶ್ಮೀರದಲ್ಲಿ ಎಸಗುತ್ತಿರುವ ದೌರ್ಜನ್ಯಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಧರ್ಮದ ರಕ್ಷಕರು ಅಥವಾ 'ಮುಜಾಹಿದ್ದೀನ್' ಎಂದು ತಮ್ಮನ್ನು ಕರೆಸಿಕೊಳ್ಳುವ ಈ ಉಗ್ರರು, ನಿರಾಶ್ರಿತರ ಶಿಬಿರಗಳಲ್ಲಿರುವ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಹಸಿವಿನಲ್ಲಿಯೂ ತಮ್ಮ ಲಾಭಪಡೆಯುತ್ತಿದ್ದಾರೆ.
ಕೇವಲ ಒಂದು ಹೊತ್ತಿನ ರೊಟ್ಟಿಗಾಗಿ ಅಸಹಾಯಕ ಮಹಿಳೆಯರನ್ನು ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಲಾಗುತ್ತಿದ್ದಾರೆ ಎಂದಿದ್ದಾರೆ. ಪಾಕಿಸ್ತಾನದ ಧಾರ್ಮಿಕ ಮತ್ತು ರಾಜಕೀಯ ವ್ಯವಸ್ಥೆಯ ಭಾಗವಾಗಿರುವ ವ್ಯಕ್ತಿಯೊಬ್ಬರೇ ಈ ಅಸಲಿಯತ್ತನ್ನು ಒಪ್ಪಿಕೊಂಡಿರುವುದು ಭಾರತದ ಗುಪ್ತಚರ ಇಲಾಖೆಯ ಪಾಲಿಗೆ ಅತ್ಯಂತ ಮಹತ್ವದ ಸಾಕ್ಷಿಯಾಗಿದೆ. ಪಾಕಿಸ್ತಾನವು ಇಷ್ಟು ದಿನ ಕಾಶ್ಮೀರದಲ್ಲಿ ನಡೆಸುತ್ತಿರುವುದು 'ಪವಿತ್ರ ಜಿಹಾದ್' ಎಂದು ಬಿಂಬಿಸುತ್ತಿತ್ತು. ಈಗ ಸತ್ಯ ಬಯಲಾಗಿದೆ. ಮುಪ್ತಿ ಸಯೀದ್ ಖಾನ್ ಅವರ ಈ ಹೇಳಿಕೆಯು ಚರ್ಚೆಗೆ ಕಾರಣವಾಗಿದೆ. ಕಾಶ್ಮೀರಿ ಜನರ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇವೆ ಎಂದು ಹೇಳಿಕೊಳ್ಳುವ ಸಂಘಟನೆಗಳೇ ಅಲ್ಲಿನ ಮಹಿಳೆಯರನ್ನು ಅತ್ಯಂತ ಹೀನಾಯವಾಗಿ ಶೋಷಿಸುತ್ತಿವೆ ಎಂಬುದು ಈಗ ಜಗತ್ತಿಗೆ ಸಾಬೀತಾಗಿದೆ.