ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಶನಿವಾರ ವ್ಯಾಪಕ ಆಕ್ರೋಶ ಭುಗಿಲೆದ್ದಿದೆ. ದೇಶದಾದ್ಯಂತ ಪ್ರತಿಭಟನಾಕಾರರು ರ್‍ಯಾಲಿ ನಡೆಸಿ ಟ್ರಂಪ್ ಅವರ ಸರ್ವಾಧಿಕಾರಿ ಧೋರಣೆಯ ಆಡಳಿತ ಶೈಲಿ, ವಲಸೆ ನೀತಿ ಹಾಗೂ ಇರಾನ್ ವಿರುದ್ಧದ ಯುದ್ಧದ ಕುರಿತು ತಮ್ಮ ಆಕ್ರೋಶಗಳನ್ನು ವ್ಯಕ್ತಪಡಿಸಿದ್ದಾರೆ. 50 ಸ್ಟೇಟ್‌ಗಳ ದೊಡ್ಡ ಹಾಗೂ ಸಣ್ಣ ನಗರಗಳು ಸೇರಿದಂತೆ 3,300ಕ್ಕೂ ಸಮಾವೇಶಗಳಲ್ಲಿ ಕನಿಷ್ಠ ಎಂಟು ಮಿಲಿಯನ್ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. ಈ ಕುರಿತು ಅಮೆರಿಕದ ಸರ್ಕಾರಿ ಮೂಲಗಳಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ. 'ನೊ ಕಿಂಗ್ಸ್' ಚಳವಳಿಯ ಭಾಗವಾಗಿ ಒಂದು ವರ್ಷದಲ್ಲಿ ಟ್ರಂಪ್ ವಿರುದ್ಧ ಜನರು ಮೂರನೇ ಸಲ ಬೀದಿಳಿಗಿಳಿದಿದ್ದಾರೆ.
2025ರ ಜನವರಿಯಲ್ಲಿ ಟ್ರಂಪ್ ಎರಡನೇ ಅವಧಿಗೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ ಅವರ ನೀತಿಗಳು ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಅಮೆರಿಕದ ಅತಿ ಜನನಿಬಿಡ ನಗರವಾದ ನ್ಯೂಯಾರ್ಕ್‌ನಲ್ಲಿ ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಆಸ್ಕರ್ ಪ್ರಶಸ್ತಿ ವಿಜೇತ ನಟ ರಾಬರ್ಟ್ ಡಿ ನರೊ ಸಹ ಇದ್ದರು. ಅಮೆರಿಕದ ರಾಜಧಾನಿ ವಾಷಿಂಗ್ಟನ್‌ನಲ್ಲೂ ಪ್ರತಿಭಟನೆ ಭುಗಿಲೆದ್ದವು. 'ಫ್ಯಾಸಿಸಂ ವಿರುದ್ಧ ಹೋರಾಡಿ' ಎಂಬ ಬ್ಯಾನರ್ ಪ್ರದರ್ಶಿಸಿ ಮೆರವಣಿಗೆ ನಡೆಸಲಾಯಿತು.