ಅಬುಧಾಬಿ: ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಭೀಕರ ಸಂಘರ್ಷದ ಬಿಸಿ ಇದೀಗ ಅನಿವಾಸಿ ಭಾರತೀಯರಿಗೂ ತಟ್ಟಿದೆ. ಅಬುಧಾಬಿಯಲ್ಲಿ ಇರಾನ್ ಉಡಾಯಿಸಿದ ಕ್ಷಿಪಣಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನ (UAE) ವಾಯು ರಕ್ಷಣಾ ವ್ಯವಸ್ಥೆಯು ಯಶಸ್ವಿಯಾಗಿ ತಡೆಹಿಡಿದಿದೆ. ಆದರೆ, ಆಕಾಶದಲ್ಲಿ ಕ್ಷಿಪಣಿ ಸಿಡಿದ ನಂತರ ಕೆಳಗೆ ಬಿದ್ದ ಅವಶೇಷಗಳು ಜನನಿಬಿಡ ಪ್ರದೇಶದ ಮೇಲೆ ಬಿದ್ದ ಪರಿಣಾಮ ಒಬ್ಬ ಭಾರತೀಯ ಪ್ರಜೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಈ ದುರ್ಘಟನೆಯಲ್ಲಿ ಒಬ್ಬ ಪಾಕಿಸ್ತಾನಿ ಪ್ರಜೆಯೂ ಮೃತಪಟ್ಟಿದ್ದು, ಇಬ್ಬರು ಭಾರತೀಯರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಫೆಬ್ರವರಿ ಕೊನೆಯ ವಾರದಿಂದ ನಡೆಯುತ್ತಿರುವ ಈ ಸಮರದಲ್ಲಿ ಸಾವನ್ನಪ್ಪಿದ ಭಾರತೀಯರ ಸಂಖ್ಯೆ ಇದೀಗ ಏಳಕ್ಕೆ ಏರಿಕೆಯಾಗಿದೆ.
ಘಟನೆಯ ಬಗ್ಗೆ ಅಬುಧಾಬಿ ಮಾಧ್ಯಮ ಕಚೇರಿ ಸ್ಪಷ್ಟನೆ ನೀಡಿದ್ದು, ವಾಯು ರಕ್ಷಣಾ ವ್ಯವಸ್ಥೆಯು ಇರಾನ್‌ನಿಂದ ಬಂದ ಕ್ಷಿಪಣಿಯನ್ನು ನಾಶಪಡಿಸಿದರೂ, ಅದರ ಅವಶೇಷಗಳು ಸ್ವೈಹಾನ್ ರಸ್ತೆಯ ಮೇಲೆ ಬಿದ್ದಿದ್ದರಿಂದ ಈ ಅನಾಹುತ ಸಂಭವಿಸಿದೆ ಎಂದು ತಿಳಿಸಿದೆ. ಭಾರತೀಯ ರಾಯಭಾರ ಕಚೇರಿಯು ಈ ದುರ್ಘಟನೆಯ ಬಗ್ಗೆ ತೀವ್ರ ಸಂತಾಪ ಸೂಚಿಸಿದ್ದು, ಮೃತ ವ್ಯಕ್ತಿಯ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದೆ. ಯುಎಇ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ.
ಸಂಘರ್ಷದ ವಾತಾವರಣ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ, ಮಧ್ಯಪ್ರಾಚ್ಯದಲ್ಲಿ ನೆಲೆಸಿರುವ ಭಾರತೀಯರು ಎಚ್ಚರಿಕೆಯಿಂದ ಇರಬೇಕೆಂದು ಮತ್ತು ಸ್ಥಳೀಯ ಅಧಿಕಾರಿಗಳ ಸೂಚನೆಗಳನ್ನು ಪಾಲಿಸಬೇಕೆಂದು ಕೇಂದ್ರ ಸರ್ಕಾರ ಹಾಗೂ ರಾಯಭಾರ ಕಚೇರಿಗಳು ಮನವಿ ಮಾಡಿವೆ.