image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಅಮೆರಿಕ ಮತ್ತು ಇಸ್ರೇಲ್ ಜೊತೆ ಸೇರಿ ಇರಾನ್ ಮೇಲೆ ನೇರ ದಾಳಿ ನಡೆಸುವ ಮುನ್ಸೂಚನೆ ನೀಡಿದ ಯು ಎ ಇ

ಅಮೆರಿಕ ಮತ್ತು ಇಸ್ರೇಲ್ ಜೊತೆ ಸೇರಿ ಇರಾನ್ ಮೇಲೆ ನೇರ ದಾಳಿ ನಡೆಸುವ ಮುನ್ಸೂಚನೆ ನೀಡಿದ ಯು ಎ ಇ

 ಅಬುಧಾಬಿ : ಕಳೆದ ಮೂರು ವಾರಗಳಿಂದ ನಿರಂತರವಾಗಿ ಇರಾನ್‌ನಿಂದ ಬರುತ್ತಿರುವ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಿಂದ ಅರಬ್ ಸಂಯುಕ್ತ ಸಂಸ್ಥಾನದ ತಾಳ್ಮೆ ಈಗ ಅಂತಿಮ ಹಂತಕ್ಕೆ ತಲುಪಿದೆ. ಇಷ್ಟು ದಿನ ರಕ್ಷಣಾತ್ಮಕವಾಗಿದ್ದ ಯುಎಇ, ಈಗ ಅಮೆರಿಕ ಮತ್ತು ಇಸ್ರೇಲ್ ಜೊತೆ ಸೇರಿ ಇರಾನ್ ಮೇಲೆ ನೇರ ದಾಳಿ ನಡೆಸುವ ಮುನ್ಸೂಚನೆ ನೀಡಿದೆ. ಇದು ಕೇವಲ ಯುದ್ಧವಲ್ಲ, ಮಧ್ಯಪ್ರಾಚ್ಯದ ಭೂಪಟವನ್ನೇ ಬದಲಿಸಬಲ್ಲ ಮಹಾ ಸಂಘರ್ಷಕ್ಕೆ ನಾಂದಿಯಾಗುವ ಸಾಧ್ಯತೆಯಿದೆ. ಕಳೆದ 21 ದಿನಗಳಲ್ಲಿ ಇರಾನ್ ಬರೋಬ್ಬರಿ 2,200ಕ್ಕೂ ಹೆಚ್ಚು ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಯುಎಇ ಗುರಿಯಾಗಿಸಿ ಉಡಾಯಿಸಿದೆ. ಯುಎಇಯ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಯು ಇದರಲ್ಲಿ ಶೇ. 95 ರಷ್ಟು ದಾಳಿಗಳನ್ನು ಯಶಸ್ವಿಯಾಗಿ ತಡೆದಿದ್ದರೂ, ಸತತ ಬೆದರಿಕೆಯಿಂದಾಗಿ ದೇಶದ ಆರ್ಥಿಕತೆ ಮತ್ತು ಸುರಕ್ಷತೆಗೆ ಧಕ್ಕೆಯುಂಟಾಗಿದೆ. ಕೇವಲ ಕದನ ವಿರಾಮ ಸಾಕಾಗದು, ಈ ಸಮಸ್ಯೆಗೆ ಶಾಶ್ವತ ಅಂತ್ಯ ಬೇಕು ಎಂದು ಅಮೆರಿಕದಲ್ಲಿರುವ ಯುಎಇ ರಾಯಭಾರಿ ನೀಡಿರುವ ಹೇಳಿಕೆ ಯುದ್ಧದ ಮುನ್ಸೂಚನೆಯನ್ನು ದೃಢಪಡಿಸಿದೆ.

ಅತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಾರ್ಮುಜ್ ಜಲಸಂಧಿಯನ್ನು ಮರಳಿ ತೆರೆಯಲು ಬೃಹತ್ ಭೂಸೇನಾ ದಾಳಿಗೆ ಸಂಚು ರೂಪಿಸುತ್ತಿದ್ದಾರೆ ಎಂಬ ವದಂತಿಗಳು ಬಲವಾಗಿವೆ. ಏಪ್ರಿಲ್ 6 ರವರೆಗೆ ಇರಾನ್‌ನ ಇಂಧನ ಕೇಂದ್ರಗಳ ಮೇಲೆ ದಾಳಿ ಮಾಡದಿರಲು ಟ್ರಂಪ್ ನಿರ್ಧರಿಸಿದ್ದರೂ, ಒಳಗೊಳಗೆ ಅಮೆರಿಕದ ಸೈನ್ಯವು ಯುಎಇ ನೆಲವನ್ನು ಬಳಸಿಕೊಂಡು ಇರಾನ್ ಮೇಲೆ ಆಕ್ರಮಣ ಮಾಡಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ. ರಷ್ಯಾದ ಗುಪ್ತಚರ ಇಲಾಖೆಯ ಮಾಹಿತಿಯ ಪ್ರಕಾರ, ಅಮೆರಿಕದ ಈ ಭೂಸೇನಾ ದಾಳಿಯು ಯುಎಇಯಿಂದಲೇ ಪ್ರಾರಂಭವಾಗಲಿದೆ ಎಂಬ ಆತಂಕ ಇರಾನ್ ಅನ್ನು ಕಾಡುತ್ತಿದೆ. ಯುಎಇ ಮತ್ತು ಇರಾನ್ ನಡುವೆ 1971 ರಿಂದಲೂ ಅಬು ಮೂಸಾ ಮತ್ತು ಟನ್ಬ್ ದ್ವೀಪಗಳ ಕುರಿತು ಗಡಿ ವಿವಾದವಿದೆ. ಈ ಆಯಕಟ್ಟಿನ ದ್ವೀಪಗಳನ್ನು ಇರಾನ್ ವಶಪಡಿಸಿಕೊಂಡಿರುವುದು ಯುಎಇಗೆ ದೊಡ್ಡ ನೋವಾಗಿ ಉಳಿದಿದೆ. ಈಗ ಯುದ್ಧದ ನೆಪದಲ್ಲಿ ಈ ದ್ವೀಪಗಳನ್ನು ಮರಳಿ ಪಡೆಯಲು ಯುಎಇ ಪ್ರಯತ್ನಿಸಬಹುದು ಎಂಬ ಭಯ ಇರಾನ್‌ಗೆ ಎದುರಾಗಿದೆ. 2020 ರ ಅಬ್ರಹಾಂ ಒಪ್ಪಂದ ನಂತರ ಇಸ್ರೇಲ್ ಜೊತೆ ಯುಎಇ ಹೊಂದಿರುವ ಆಪ್ತ ಸಂಬಂಧವು ಈ ಯುದ್ಧದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

Category
ಕರಾವಳಿ ತರಂಗಿಣಿ