ಟೆಹ್ರಾನ್ : ಇಡೀ ವಿಶ್ವವೇ ಶಾಂತಿ ಮತ್ತು ಮಾನವ ಹಕ್ಕುಗಳ ಬಗ್ಗೆ ಮಾತನಾಡುತ್ತಿರುವ ಬೆನ್ನಲ್ಲೇ, ಇರಾನ್ ಸರ್ಕಾರವು ತನ್ನ ದಮನಕಾರಿ ನೀತಿಯನ್ನು ಮುಂದುವರಿಸಿದೆ. ಇತ್ತೀಚಿನ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದ 19 ವರ್ಷದ ಉದಯೋನ್ಮುಖ ಕುಸ್ತಿಪಟು ಸಲೇಹ್ ಮೊಹಮ್ಮದಿ ಸೇರಿದಂತೆ ಮೂವರು ಪ್ರತಿಭಟನಾಕಾರರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವ ಮೂಲಕ ಇರಾನ್ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಇರಾನ್‌ನ ಕ್ಯೂಮ್ ನಗರದಲ್ಲಿ ಗುರುವಾರ ಬೆಳಿಗ್ಗೆ ಈ ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ. ಸಲೇಹ್ ಮೊಹಮ್ಮದಿ ಅವರೊಂದಿಗೆ ಸಯೀದ್ ದಾವೋದಿ ಮತ್ತು ಮೆಹದಿ ಘಾಸೆಮಿ ಎಂಬುವವರನ್ನು ಸಾರ್ವಜನಿಕರ ಸಮ್ಮುಖದಲ್ಲೇ ನೇಣಿಗೇರಿಸಲಾಗಿದೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮಗಳು ದೃಢಪಡಿಸಿವೆ.ಡಿಸೆಂಬರ್ 2025 ಮತ್ತು ಜನವರಿ 2026ರಲ್ಲಿ ಇರಾನ್‌ನಲ್ಲಿ ನಡೆದ ದೇಶವ್ಯಾಪಿ ಪ್ರತಿಭಟನೆಗಳ ಸಂದರ್ಭದಲ್ಲಿ ಇಬ್ಬರು ಪೊಲೀಸರನ್ನು ಕೊಂದ ಆರೋಪ ಇವರ ಮೇಲಿತ್ತು. ಆದರೆ, ಮಾನವ ಹಕ್ಕುಗಳ ಸಂಘಟನೆಗಳ ಪ್ರಕಾರ, ಇದು ಕೇವಲ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ನಡೆದ "ಕಾನೂನುಬಾಹಿರ ಕೊಲೆ" ಎಂದು ಖಂಡಿಸಲಾಗಿದೆ. ಇರಾನ್‌ನಲ್ಲಿ ನಡೆಯುತ್ತಿರುವ ಈ ಸಾಮೂಹಿಕ ಹತ್ಯೆಗಳನ್ನು ತಡೆಯಲು ವಿಶ್ವಸಂಸ್ಥೆ ಮತ್ತು ಯುರೋಪಿಯನ್ ಒಕ್ಕೂಟ ಮಧ್ಯಪ್ರವೇಶಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಕ್ರೀಡಾಪಟುಗಳನ್ನು ಗುರಿಯಾಗಿಸುತ್ತಿರುವ ಕಾರಣ ಇರಾನ್ ದೇಶವನ್ನು ಅಂತರಾಷ್ಟ್ರೀಯ ಕ್ರೀಡಾಕೂಟಗಳಿಂದ ನಿಷೇಧಿಸಬೇಕು ಎಂಬ ಕೂಗು ಕೂಡ ಜೋರಾಗಿದೆ. ಇರಾನ್ ಸರ್ಕಾರವು ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದು, ತನ್ನ ವಿರುದ್ಧ ಧ್ವನಿ ಎತ್ತುವ ಜನರನ್ನು ದಮನ ಮಾಡಲು ಗಲ್ಲು ಶಿಕ್ಷೆಯನ್ನು ಅಸ್ತ್ರವಾಗಿ ಬಳಸುತ್ತಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.