ಕತಾರ್ : ಕತಾರ್ ನ ಲಾಸ್ ರಫನ್ LNG ತಾಣದ ಮೇಲೆ ಇರಾನ್ ನಡೆಸಿದ ದಾಳಿಯ ಪರಿಣಾಮ ಜಾಗತಿಕ ಅನಿಲ ಮಾರುಕಟ್ಟೆಯಲ್ಲಿ ಕೊರತೆ, ಸರಬರಾಜು ವಿಳಂಬ ಹಾಗೂ ವೆಚ್ಚ ಏರಿಕೆಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ವರ್ಷಕ್ಕೆ ಸುಮಾರು 77 ಮಿಲಿಯನ್ ಟನ್ ಸಾಮರ್ಥ್ಯ ಹೊಂದಿರುವ ಈ ತಾಣವು ಜಾಗತಿಕ LNG ಮಾರುಕಟ್ಟೆಯ ಸುಮಾರು 25% ಪಾಲನ್ನು ಹೊಂದಿದೆ. ಆದ್ದರಿಂದ ಇಲ್ಲಿ ಉಂಟಾದ ವ್ಯತ್ಯಯವು ಜಾಗತಿಕ ಸರಬರಾಜು ಸರಪಳಿಗೆ ದೊಡ್ಡ ಹೊಡೆತ ನೀಡಲಿದೆ ಎಂದು ಅಮೇರಿಕನ್ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ವ್ಯವಹಾರ ಪ್ರಾಧ್ಯಾಪಕ ಬಬಾಕ್ ಹಫೆಜಿ ತಿಳಿಸಿದ್ದಾರೆ. ಈ ಅಡಚಣೆಯಿಂದ LNG ಬೆಲೆಗಳು ಜಾಗತಿಕವಾಗಿ ಗಣನೀಯವಾಗಿ ಏರಿಕೆಯಾಗಲಿವೆ. ವಿಶೇಷವಾಗಿ ಯುರೋಪಿನ ಮಾರುಕಟ್ಟೆಗಳು ಹೆಚ್ಚು ಪರಿಣಾಮಕ್ಕೆ ಒಳಗಾಗಲಿವೆ. ಉಕ್ರೇನ್ ಯುದ್ಧದ ನಂತರ ಮತ್ತು ನಾರ್ಡ್ ಸ್ಟ್ರೀಮ್ ಪೈಪ್‌ಲೈನ್ ಗಳ ನಾಶದ ಬಳಿಕ ಜರ್ಮನಿ ಸೇರಿದಂತೆ ಯುರೋಪಿಯನ್ ಒಕ್ಕೂಟವು LNGಯ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದು ಅವರು ಹೇಳಿದ್ದಾರೆ.
ಜಪಾನ್, ತುರ್ಕಿಯೆ, ಭಾರತ ಸೇರಿದಂತೆ ಹಲವು ದೇಶಗಳು LNGಯನ್ನು ಅವಲಂಬಿಸಿವೆ. ಜಾಗತಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ದುರ್ಬಲ ಆರ್ಥಿಕತೆ ಹೊಂದಿರುವ ಸಣ್ಣ ರಾಷ್ಟ್ರಗಳು ಹೆಚ್ಚು ಹಾನಿಗೊಳಗಾಗುವ ಸಾಧ್ಯತೆ ಇದೆ. ಬೆಲೆ ಏರಿಕೆಯಿಂದ ಬೇಡಿಕೆ ಕುಸಿತವೂ ಉಂಟಾಗಬಹುದು ಎಂದು ಅವರು ತಿಳಿಸಿದ್ದಾರೆ. ಜಾಗತಿಕ ಬೇಡಿಕೆಯಲ್ಲಿ ಬದಲಾವಣೆಗಳೂ ಸಂಭವಿಸಬಹುದು. ಹೆಚ್ಚಿನ ಬೆಲೆಗಳಿಂದ ಕೆಲವು ವ್ಯವಹಾರ ಚಟುವಟಿಕೆಗಳು ಲಾಭದಾಯಕವಾಗದೇ ಇರಬಹುದು. ಕೆಲವು ಕೈಗಾರಿಕೆಗಳು ಪರ್ಯಾಯ ಇಂಧನಗಳತ್ತ ತಿರುಗಬೇಕಾದ ಪರಿಸ್ಥಿತಿ ಎದುರಾಗಬಹುದು. ತೈಲ ಮತ್ತು ಅನಿಲ ಬಳಕೆ ಆರ್ಥಿಕತೆಯ ಎಲ್ಲ ಹಂತಗಳ ಮೇಲೂ ಪರಿಣಾಮ ಬೀರುವುದರಿಂದ, ಉತ್ಪಾದನೆಯಿಂದ ವಿತರಣೆಯವರೆಗೆ ಬೆಲೆಗಳು ಏರಿಕೆಯಾಗಲಿವೆ. ಇದರ ಪರಿಣಾಮವಾಗಿ ಜಾಗತಿಕ ಹಣದುಬ್ಬರ ಹೆಚ್ಚುವ ಸಾಧ್ಯತೆ ಇದೆ ಮತ್ತು ಮಾರುಕಟ್ಟೆಗಳು ನಿಶ್ಚಲಗೊಳ್ಳುವ ಭೀತಿ ವ್ಯಕ್ತವಾಗಿದೆ.