image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಪಾಕಿಸ್ತಾನದಿಂದ ಸೌದಿಗೆ ಸಂಪೂರ್ಣ ಸೇನಾ ಮತ್ತು ವ್ಯೂಹಾತ್ಮಕ ನೆರವಿನ ಭರವಸೆ

ಪಾಕಿಸ್ತಾನದಿಂದ ಸೌದಿಗೆ ಸಂಪೂರ್ಣ ಸೇನಾ ಮತ್ತು ವ್ಯೂಹಾತ್ಮಕ ನೆರವಿನ ಭರವಸೆ

ಇಸ್ಲಾಮಾಬಾದ್ : ಇರಾನ್‌ನಿಂದ ಸೌದಿ ಅರೇಬಿಯಾ ಮೇಲೆ ನಿರಂತರ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಪಾಕಿಸ್ತಾನವು ಸೌದಿಗೆ ಸಂಪೂರ್ಣ ಸೇನಾ ಮತ್ತು ವ್ಯೂಹಾತ್ಮಕ ನೆರವು ನೀಡುವುದಾಗಿ ಭರವಸೆ ನೀಡಿದೆ. ಆದರೆ ಈ ಭರವಸೆಯು ಇರಾನ್‌ನೊಂದಿಗೆ ಗಡಿ ಹಂಚಿಕೊಂಡಿರುವ ಪಾಕಿಸ್ತಾನವನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ. ಮಧ್ಯಪ್ರಾಚ್ಯ ಸಂಘರ್ಷದ ನಡುವೆಯೇ ಶನಿವಾರ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ ಪಾಕ್ ಸಶಸ್ತ್ರ ಪಡೆಗಳ ಮುಖ್ಯಸ್ಥ ಅಸಿಂ ಮುನೀರ್, ಸೌದಿ ರಕ್ಷಣಾ ಸಚಿವ ಖಾಲಿದ್ ಬಿನ್ ಸಲ್ಮಾನ್ ಜತೆ ಮಾತುಕತೆ ನಡೆಸಿದರು. ಈ ವೇಳೆ, ಸೌದಿಯ ಭದ್ರತೆಗೆ ಎದುರಾಗಬಹುದಾದ ಯಾವುದೇ ಅಪಾಯವನ್ನು ತಡೆಗಟ್ಟಲು ಮಿಲಿಟರಿ ಮತ್ತು ವ್ಯೂಹಾತ್ಮಕ ನೆರವು ನೀಡಲು ಪಾಕಿಸ್ತಾನ ಸಿದ್ದ ಎಂಬ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಸಭೆಯ ಬಗ್ಗೆ ಪ್ರತಿಕ್ರಿಯಿಸಿದ ಸೌದಿಯ ರಕ್ಷಣಾ ಸಚಿವ ಸಲ್ಮಾನ್, ಸೌದಿಯ ಮೇಲೆ ಇರಾನ್‌ನ ದಾಳಿ ಮತ್ತು ಅದನ್ನು ಪಾಕ್ ಹಾಗೂ ಸೌದಿ ಅರೇಬಿಯಾ ನಡುವಣ ರಕ್ಷಣಾ ಒಪ್ಪಂದದ ವ್ಯಾಪ್ತಿಯಲ್ಲಿ ಹೇಗೆ ತಡೆಗಟ್ಟಬಹುದು ಎಂಬುದರ ಬಗ್ಗೆ ನಾವು ಚರ್ಚಿಸಿದೆವು ಎಂದು ಹೇಳಿದ್ದಾರೆ. ತನ್ನ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕಳೆದ ವರ್ಷ ಸೌದಿ ಅರೇಬಿಯಾವು ಅಣ್ವಸ್ತ್ರ ಶಕ್ತ ದೇಶವಾದ ಪಾಕಿಸ್ತಾನದೊಂದಿಗೆ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿತ್ತು. ಈ ಒಪ್ಪಂದದ ಅನ್ವಯ ಉಭಯ ದೇಶಗಳ ಪೈಕಿ ಯಾರ ಭದ್ರತೆಗೆ ಅಪಾಯ ಬಂದರೂ ಮತ್ತೊಂದು ದೇಶ ಅದರ ನೆರವಿಗೆ ಧಾವಿಸಬೇಕು ಎಂದು ಸ್ಪಷ್ಟಪಡಿಸಲಾಗಿತ್ತು.

Category
ಕರಾವಳಿ ತರಂಗಿಣಿ