ನ್ಯೂಯಾರ್ಕ್ : ನಾವು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿ ಎಂದಿದ್ದೆವು, ಅವರು ಹಾಗೇ ಮಾಡಿದರು ಎಂದು ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ. 'ಅಮೆರಿಕ ಇಂಧನ ಪ್ರಾಬಲ್ಯದ ನೀತಿ'ಯಿಂದಾಗಿ ಜಗತ್ತಿನಲ್ಲಿ ತೈಲ ಸರಬರಾಜಿಗೆ ಯಾವುದೇ ತೊಂದರೆಯಾಗುತ್ತಿಲ್ಲ. ಅದಕ್ಕಾಗಿ ಎಲ್ಲರೂ ನಮಗೆ ಧನ್ಯವಾದ ಹೇಳಬೇಕು ಎಂದು ಹೇಳಿದ್ದಾರೆ. ನಮ್ಮ ಮಿತ್ರರಾಷ್ಟ್ರವಾದ ಭಾರತವು ನಾವು ಹೇಳಿದಂತೆ ನಡೆದುಕೊಳ್ಳುತ್ತಿದೆ. ಅವರು ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಿದ್ದಾರೆ. ಆದರೆ, ಜಗತ್ತಿನಲ್ಲಿ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವ ಹಿನ್ನಲೆಯಲ್ಲಿ, ಅದನ್ನು ಕಡಿಮೆ ಮಾಡುವ ಉದ್ದೇಶದಿಂದ ಈಗಾಗಲೇ ಸಮುದ್ರ ಮಾರ್ಗದಲ್ಲಿ ಸಾಗಣೆ ಹಂತದಲ್ಲಿರುವ ರಷ್ಯಾ ತೈಲ ಖರೀದಿಗೆ ನಾವು ಅವರಿಗೆ ತಾತ್ಕಾಲಿಕ ಅನುಮತಿ ನೀಡಿದ್ದೇವೆ ಎಂದು ಹೇಳಿದ್ದಾರೆ.
ಭಾರತವು ಈಗ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವುದು ಅಲ್ಪಾವಧಿಯ ಕ್ರಮವಾಗಿದೆ. ಇದರಿಂದ ರಷ್ಯಾಗೆ ಗಮನಾರ್ಹ ಆರ್ಥಿಕ ಪ್ರಯೋಜನವಾಗುವುದಿಲ್ಲ. ಯಾಕೆಂದರೆ ಇದು ಈಗಾಗಲೇ ಸಮುದ್ರದಲ್ಲಿ ಸಿಲುಕಿರುವ ತೈಲವನ್ನು ಒಳಗೊಂಡ ವಹಿವಾಟುಗಳನ್ನು ಮಾತ್ರ ಅಧಿಕೃತಗೊಳಿಸುತ್ತದೆ ಎಂದಿದ್ದಾರೆ. ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಪೂರೈಕೆಯನ್ನು ಸುಗಮಗೊಳಿಸುವ ಉದ್ದೇಶದಿಂದ, ಈಗಾಗಲೇ ಸಮುದ್ರ ಮಾರ್ಗದಲ್ಲಿ ಸಾಗಣೆ ಹಂತದಲ್ಲಿರುವ ರಷ್ಯಾ ತೈಲ ಖರೀದಿಗೆ ಭಾರತಕ್ಕೆ 'ಅನುಮತಿ' ನೀಡಲಾಗಿದೆ ಎಂದು ಅಮೆರಿಕ ಹೇಳಿತ್ತು. ದಕ್ಷಿಣ ಏಷ್ಯಾದಲ್ಲಿ ಸಾಗಣೆಯಲ್ಲಿರುವ ರಷ್ಯಾ ತೈಲ ಖರೀದಿಗೆ ಭಾರತದಲ್ಲಿರುವ ನಮ್ಮ ಸ್ನೇಹಿತರಿಗೆ ನಾವು ಅವಕಾಶ ನೀಡಿದ್ದೇವೆ ಎಂದು ಅಮೆರಿಕ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ಶುಕ್ರವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ತೈಲ ಬೆಲೆ ಇಳಿಕೆ ಮಾಡಲು ಇದು ತಾತ್ಕಾಲಿಕ ಕ್ರಮ ಎಂದಿದ್ದರು.