ಟೆಹ್ರಾನ್ : ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀಕರತೆ ಮುಂದುವರಿದಿರುವಂತೆಯೇ, ಇರಾನ್‌ನ ಪ್ರಬಲ ನಾಯಕ ಹಾಗೂ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಅಲಿ ಲಾರಿಜಾನಿ ಅಮೆರಿಕದ ವಿರುದ್ಧ ಕೆಂಡಕಾರಿದ್ದಾರೆ. ನಾವು ಅಮೆರಿಕದೊಂದಿಗೆ ಎಂದಿಗೂ ಮಾತುಕತೆ ನಡೆಸುವುದಿಲ್ಲ ಎಂದು ಹೇಳುವ ಮೂಲಕ ಸಂಧಾನದ ಎಲ್ಲಾ ಬಾಗಿಲುಗಳನ್ನು ಮುಚ್ಚಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಇತ್ತೀಚೆಗೆ ಇರಾನ್ ನಮ್ಮೊಂದಿಗೆ ಮಾತನಾಡಲು ಬಯಸುತ್ತಿದೆ ಮತ್ತು ನಾನು ಅದಕ್ಕೆ ಒಪ್ಪಿದ್ದೇನೆ ಎಂದು ಹೇಳಿಕೆ ನೀಡಿದ್ದರು. ಆದರೆ ಈ ಹೇಳಿಕೆಯನ್ನು ಕಪೋಲಕಲ್ಪಿತ ಎಂದು ಕರೆದಿರುವ ಲಾರಿಜಾನಿ, ಟ್ರಂಪ್ರ ಅಮೆರಿಕ ಫಸ್ಟ್ ನೀತಿಯು ಈಗ ಇಸ್ರೇಲ್ ಫಸ್ಟ್ ಆಗಿ ಬದಲಾಗಿದೆ ಎಂದು ಟೀಕಿಸಿದ್ದಾರೆ. ಟ್ರಂಪ್ ಅವರ ಭ್ರಮೆಗಳು ಇಡೀ ಪ್ರದೇಶವನ್ನು ಅವಾಂತರಕ್ಕೆ ತಳ್ಳಿವೆ ಮತ್ತು ಅಮೆರಿಕದ ಸೈನಿಕರ ಪ್ರಾಣವನ್ನು ಅಪಾಯಕ್ಕೆ ಹಾಕಿವೆ ಎಂದು ಕಿಡಿಕಾರಿದ್ದಾರೆ. ಇರಾನ್ ಮೊದಲು ದಾಳಿ ಮಾಡಿಲ್ಲ ಎಂದು ಪ್ರತಿಪಾದಿಸಿದ ಲಾರಿಜಾನಿ, ಇಂದು ಇರಾನ್ ರಾಷ್ಟ್ರವು ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿದೆ. ಇರಾನ್ ಸಶಸ್ತ್ರ ಪಡೆಗಳು ಈ ಆಕ್ರಮಣವನ್ನು ಪ್ರಾರಂಭಿಸಿಲ್ಲ ಎಂದು ಹೇಳುವ ಮೂಲಕ ಅಮೆರಿಕ ಮತ್ತು ಇಸ್ರೇಲ್ ಅನ್ನು ಆಕ್ರಮಣಕಾರರು ಎಂದು ಕರೆದಿದ್ದಾರೆ. ತಾತ್ಕಾಲಿಕ ಆಡಳಿತ ಮಂಡಳಿ ರಚನೆ
ಅಲಿ ಖಮೇನಿ ಅವರ ಹತ್ಯೆಯ ನಂತರ ದೇಶದಲ್ಲಿ ಉಂಟಾಗಿರುವ ಶೂನ್ಯವನ್ನು ತುಂಬಲು ತಾತ್ಕಾಲಿಕ ನಾಯಕತ್ವ ಮಂಡಳಿಯನ್ನು ರಚಿಸಲಾಗಿದೆ ಎಂದು ಅಲಿ ಲಾರಿಜಾನಿ ದೃಢಪಡಿಸಿದ್ದಾರೆ. ಹೊಸ ಸುಪ್ರೀಂ ಲೀಡರ್ ಆಯ್ಕೆಯಾಗುವವರೆಗೆ ಈ ಮಂಡಳಿಯು ದೇಶದ ಜವಾಬ್ದಾರಿಯನ್ನು ಹೊರಲಿದೆ ಎಂದು ಆಲಿ ತಿಳಿಸಿದ್ದಾರೆ. ವಾಲ್ ಸ್ಟ್ರೀಟ್ ಜರ್ನಲ್ ವರದಿಯೊಂದರಲ್ಲಿ ಲಾರಿಜಾನಿ ಅವರು ಒಮನ್ ಮೂಲಕ ಅಮೆರಿಕದೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಇದನ್ನು ಲಾರಿಜಾನಿ ಸಂಪೂರ್ಣವಾಗಿ ನಿರಾಕರಿಸಿದ್ದು, ಇದೆಲ್ಲವೂ ಅಮೆರಿಕದ ಕಟ್ಟುಕಥೆ ಎಂದು ಹೇಳಿದ್ದಾರೆ. ಅಯತೊಲ್ಲಾ ಅಲಿ ಖಮೇನಿ ಹತ್ಯೆಯ ನಂತರ ಇರಾನ್‌ನಲ್ಲಿ ಹೊಸ ನಾಯಕನ ನೇಮಕವಾಗುವವರೆಗೆ ಮೂವರು ಸದಸ್ಯರ ತಾತ್ಕಾಲಿಕ ನಾಯಕತ್ವ ಮಂಡಳಿ ಆಡಳಿತ ನಡೆಸುತ್ತಿದೆ. ಈ ಮಂಡಳಿಯಲ್ಲಿ ಲಾರಿಜಾನಿ ಸ್ಥಾನ ಪಡೆದಿಲ್ಲವಾದರೂ, ಅವರು ಪ್ರಸ್ತುತ ದೇಶದ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ಇರಾನ್ ಮೇಲೆ ಬಾಂಬ್ ಮತ್ತು ಕ್ಷಿಪಣಿಗಳ ಮಳೆ ಸುರಿಸುತ್ತಿರುವ ಟ್ರಂಪ್ ಅವರ ಅಸಲಿ ಗುರಿ ಇರಾನ್‌ನಲ್ಲಿ ಆಡಳಿತ ಬದಲಾವಣೆ ಮಾಡುವುದಾಗಿದೆ. ಇದು ನಿಮ್ಮ ದೇಶವನ್ನು ನೀವು ಮರಳಿ ಪಡೆಯಲು ಇರುವ ಕೊನೆಯ ಅವಕಾಶ ಎಂದು ಅವರು ಇರಾನ್ ಜನತೆಗೆ ಕರೆ ನೀಡಿದ್ದಾರೆ. ಇರಾನ್ ಜನರು ಸರ್ಕಾರದ ವಿರುದ್ಧ ದಂಗೆ ಏಳುವಂತೆ ಟ್ರಂಪ್ ಪ್ರೇರೇಪಿಸುತ್ತಿದ್ದಾರೆ.