image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಭಯೋತ್ಪಾದನೆಯ ವಿರುದ್ಧ ಗುಡುಗುತ್ತಾ, ಜಾಗತಿಕ ಶಾಂತಿ ಮತ್ತು ನಾಗರಿಕ ಸುರಕ್ಷತೆಯ ಬಗ್ಗೆ ಭಾರತದ ಸ್ಪಷ್ಟ ನಿಲುವನ್ನು ತಿಳಿಸಿದ ಮೋದಿ

ಭಯೋತ್ಪಾದನೆಯ ವಿರುದ್ಧ ಗುಡುಗುತ್ತಾ, ಜಾಗತಿಕ ಶಾಂತಿ ಮತ್ತು ನಾಗರಿಕ ಸುರಕ್ಷತೆಯ ಬಗ್ಗೆ ಭಾರತದ ಸ್ಪಷ್ಟ ನಿಲುವನ್ನು ತಿಳಿಸಿದ ಮೋದಿ

ಟೆಲ್ ಅವಿವ್ : ಇಸ್ರೇಲ್ ಸಂಸತ್​ ಭವನ ನೆಸ್ಸೆಟ್​​ನಲ್ಲಿ ಬುಧವಾರ ಐತಿಹಾಸಿಕ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಮಾತಿನುದ್ದಕ್ಕೂ ಭಯೋತ್ಪಾದನೆಯ ವಿರುದ್ಧ ಗುಡುಗುತ್ತಾ, ಜಾಗತಿಕ ಶಾಂತಿ ಮತ್ತು ನಾಗರಿಕ ಸುರಕ್ಷತೆಯ ಬಗ್ಗೆ ಭಾರತದ ಸ್ಪಷ್ಟ ನಿಲುವನ್ನು ತಿಳಿಸಿದರು. ಭಯೋತ್ಪಾದನೆಯು ಕೇವಲ ಒಂದು ದೇಶದ ಸಮಸ್ಯೆಯಲ್ಲ, ಅದು ಮಾನವೀಯತೆಯ ವಿರೋಧಿ. ಯಾವುದೇ ಸಿದ್ಧಾಂತ, ಧರ್ಮ ಅಥವಾ ರಾಜಕೀಯ ಕಾರಣಗಳು ಅಮಾಯಕ ನಾಗರಿಕರ ಹತ್ಯೆಯನ್ನು ಸಮರ್ಥಿಸಲು ಸಾಧ್ಯವೇ ಇಲ್ಲ ಎಂದು ಗುಡುಗಿದ ಪ್ರಧಾನಿ, ಭಯೋತ್ಪಾದನೆಯನ್ನು ಒಳ್ಳೆಯ ಮತ್ತು ಕೆಟ್ಟ ಭಯೋತ್ಪಾದನೆ ಎಂದು ವಿಂಗಡಿಸುವುದನ್ನು ಮೊದಲು ನಿಲ್ಲಿಸಬೇಕು ಎಂದರು. 26/11 ಮುಂಬೈ ದಾಳಿ ಮತ್ತು ಇಸ್ರೇಲಿ ನಾಗರಿಕರು ಸೇರಿದಂತೆ ಮುಗ್ಧ ಜೀವಗಳನ್ನು ಕಳೆದುಕೊಂಡದ್ದನ್ನು ನಾವು ನೆನಪಿಸಿಕೊಳ್ಳುತ್ತೇವೆ. ನಿಮ್ಮಂತೆಯೇ, ನಾವು ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯ ಸ್ಥಿರ ಮತ್ತು ರಾಜಿಯಾಗದ ನೀತಿಯನ್ನು ಹೊಂದಿದ್ದೇವೆ, ಇದಕ್ಕೆ ಯಾವುದೇ ದ್ವಿಮುಖ ಮಾನದಂಡಗಳಿಲ್ಲ. ಭಯೋತ್ಪಾದನೆಯು ಸಮಾಜಗಳನ್ನು ಅಸ್ಥಿರಗೊಳಿಸುವ ಮತ್ತು ಅಭಿವೃದ್ಧಿಯನ್ನು ತಡೆಯುವ ಮತ್ತು ವಿಶ್ವಾಸವನ್ನು ಕಳೆದುಕೊಳ್ಳುವ ಗುರಿ ಹೊಂದಿದೆ ಎಂದು ಹೇಳಿದರು.

ಭಾರತ ಇಸ್ರೇಲ್​ನ್ನು ಅಧಿಕೃತವಾಗಿ ಗುರುತಿಸಿದ ದಿನ, ಸೆಪ್ಟೆಂಬರ್ 17, 1950 ರಂದು ನಾನು ಜನಿಸಿದೆ ಎಂದು ಪ್ರಧಾನಿ ಮೋದಿ ಹೇಳಿಕೊಂಡಿದ್ದು, ಅಕ್ಟೋಬರ್ 7 ರಂದು ಹಮಾಸ್ ನಡೆಸಿದ ಬರ್ಬರ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ಪ್ರತಿಯೊಂದು ಜೀವ ಮತ್ತು ಕುಟುಂಬಕ್ಕೂ ಭಾರತದ ಪರವಾಗಿ ಸಂತಾಪ ಸೂಚಿಸಿದರು. ಭಾರತವು ಕಳೆದ ಹಲವಾರು ದಶಕಗಳಿಂದ ಗಡಿಯಾಚೆಗಿನ ಭಯೋತ್ಪಾದನೆಯಿಂದ ಅನುಭವಿಸುತ್ತಿರುವ ನೋವನ್ನು ಸ್ಮರಿಸಿದ ಪ್ರಧಾನಿ ಮೋದಿ, ಭಯೋತ್ಪಾದನೆಯ ದಾರುಣ ಮುಖವನ್ನು ನಮ್ಮ ದೇಶ ಬಹಳ ಹತ್ತಿರದಿಂದ ಕಂಡಿದೆ. ಸಾವಿರಾರು ಅಮಾಯಕ ಜೀವಗಳನ್ನು ನಾವು ಕಳೆದುಕೊಂಡಿದ್ದೇವೆ. ಆದ್ದರಿಂದಲೇ, ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತವು ಇಸ್ರೇಲ್‌ನಂತಹ ಸಮಾನ ಮನಸ್ಕ ರಾಷ್ಟ್ರಗಳೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದು ಹೇಳಿದರು. ಕೇವಲ ರಕ್ಷಣೆ ಮತ್ತು ತಂತ್ರಜ್ಞಾನಕ್ಕೆ ಸೀಮಿತವಾಗಿದ್ದ ಭಾರತ-ಇಸ್ರೇಲ್ ಸಂಬಂಧವು ಈಗ ಜನರಿಂದ ಜನರ ನಡುವಿನ ಸಂಬಂಧವಾಗಿ ಬೆಳೆದಿದೆ ಎಂದು ಬಣ್ಣಿಸಿದ ಮೋದಿ, ಕೃಷಿ, ಜಲ ಸಂರಕ್ಷಣೆ ಮತ್ತು ಸ್ಟಾರ್ಟ್‌ಅಪ್‌ ಕ್ಷೇತ್ರಗಳಲ್ಲಿ ಎರಡೂ ದೇಶಗಳ ಸಹಯೋಗವು ವಿಶ್ವಕ್ಕೆ ಮಾದರಿಯಾಗಿದೆ ಎಂದರು. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷದ ಬಗ್ಗೆಯೂ ಪರೋಕ್ಷವಾಗಿ ಉಲ್ಲೇಖಿಸಿದ ಪ್ರಧಾನಿ, ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕವೇ ಶಾಶ್ವತ ಪರಿಹಾರ ಸಾಧ್ಯ ಎಂದು ಪುನರುಚ್ಚರಿಸಿದರು. ಹಿಂಸಾಚಾರವು ಎಂದಿಗೂ ಪ್ರಗತಿಗೆ ದಾರಿಯಾಗಲಾರದು ಎನ್ನುವುದು ಭಾರತದ ಅಚಲ ನಂಬಿಕೆ ಎಂದು ತಿಳಿಸಿದರು. ಒಂಬತ್ತು ವರ್ಷಗಳಲ್ಲಿ ಎರಡನೇ ಬಾರಿಗೆ ಇಸ್ರೇಲ್‌ಗೆ ಭೇಟಿ ನೀಡುತ್ತಿರುವ ಮೋದಿಯನ್ನು, ಅಲ್ಲಿನ ಪ್ರಧಾನಿ ನೆತನ್ಯಾಹು ಮತ್ತು ಅವರ ಪತ್ನಿ ಸಾರಾ ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಇದೇ ವೇಳೆ ಭಾರತದ ಪ್ರಧಾನಿಗೆ ರೆಡ್​​ ಕಾರ್ಪೆಟ್ ಸ್ವಾಗತ ದೊರೆಯಿತು. ಇದಾದ ಬಳಿಕ ಉಭಯ ನಾಯಕರು ಖಾಸಗಿ ಸಭೆ ನಡೆಸಿದರು.

Category
ಕರಾವಳಿ ತರಂಗಿಣಿ