ಜೇರುಸಲೆಮ್ : ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನಗಳ ಭೇಟಿಗಾಗಿ ಫೆಬ್ರವರಿ 25 ಮತ್ತು 26ರಂದು ಇಸ್ರೇಲ್‌ಗೆ ತೆರಳುತ್ತಿದ್ದು, ಈ ಭೇಟಿಯನ್ನು ಜಗತ್ತಿನಾದ್ಯಂತ ರಕ್ಷಣಾ ತಜ್ಞರು ಕುತೂಹಲದ ಕಣ್ಣುಗಳಿಂದ ನೋಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲಿನ ಸಂಸತ್ತಾದ ನೆಸ್ಸೆಟ್ ಅನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಗಳಿವೆ ಎಂದು ಇಸ್ರೇಲ್ ಮಾಧ್ಯಮಗಳು ವಿಶ್ಲೇಸಿವೆ. ಅದರೊಡನೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಡನೆ ಪ್ರಮುಖ ವಿಚಾರಗಳನ್ನು ಚರ್ಚಿಸುವ ಸಾಧ್ಯತೆಗಳಿವೆ. ಆದರೆ, ಕೇವಲ ಕೈಕುಲುಕುವಿಕೆ ಮತ್ತು ಭಾಷಣಗಳಿಗೆ ಸೀಮಿತವಾಗದೆ, ಈ ಭೇಟಿಯ ಹಿನ್ನಲೆಯಲ್ಲಿ ಒಂದಷ್ಟು ದೊಡ್ಡ ಬೆಳವಣಿಗೆಗಳು ಮೌನವಾಗಿಯೇ ರೂಪು ತಳೆಯುತ್ತಿವೆ. ಇದು ಮುಂದಿನ ವರ್ಷಗಳಲ್ಲಿ ಭಾರತ ಹೇಗೆ ತನ್ನನ್ನು ತಾನು ರಕ್ಷಿಸಿಕೊಳ್ಳಲಿದೆ ಎನ್ನುವುದರಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ.
ಭಾರತ ಮತ್ತು ಇಸ್ರೇಲ್‌ಗಳು ಹಿಂದೆಂದಿಗಿಂತಲೂ ಭಿನ್ನವಾಗಿ ತಮ್ಮ ರಕ್ಷಣಾ ಸಹಯೋಗವನ್ನು ಆಳವಾಗಿಸುವ ಯೋಜನೆ ರೂಪಿಸುತ್ತಿವೆ. ಯಾವಾಗಲೂ ಪರಸ್ಪರರ ಮೇಲೆ ನಂಬಿಕೆ ಇರಿಸಿದ್ದ ಇಬ್ಬರು ಆತ್ಮೀಯ ಸ್ನೇಹಿತರು ಈಗ ತಮ್ಮ ಪ್ರಮುಖ ರಹಸ್ಯಗಳನ್ನು ಹಂಚಿಕೊಳ್ಳುವುದಕ್ಕೆ ಇದನ್ನು ಹೋಲಿಸಬಹುದು. ಇಸ್ರೇಲ್ ತನ್ನ ಲೇಸರ್ ಆಧಾರಿತ ಆಯುಧಗಳು, ದೀರ್ಘ ವ್ಯಾಪ್ತಿಯ ಕ್ಷಿಪಣಿಗಳು, ಮತ್ತು ಅತ್ಯಾಧುನಿಕ ಡ್ರೋನ್‌ಗಳು ಸೇರಿದಂತೆ ವಿವಿಧ ಆಧುನಿಕ ರಕ್ಷಣಾ ತಂತ್ರಜ್ಞಾನಗಳನ್ನು ಭಾರತದೊಡನೆ ಹಂಚಿಕೊಳ್ಳಲು ಒಪ್ಪಿಗೆ ಸೂಚಿಸಿದೆ. ಉಭಯ ದೇಶಗಳೂ ಒಂದು ಭದ್ರತಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಗಳಿದ್ದು, ಮುಂದಿನ ವರ್ಷಗಳಲ್ಲಿ ಉಭಯ ದೇಶಗಳ ಒಟ್ಟಾರೆ ಭದ್ರತಾ ಸಹಯೋಗ 10 ಬಿಲಿಯನ್ ಡಾಲರ್ ಮೌಲ್ಯಕ್ಕೆ ಏರಿಕೆ ಕಾಣುವ ನಿರೀಕ್ಷೆಗಳಿವೆ. ಇದೊಂದು ಬೃಹತ್ ಸಂಖ್ಯೆಯಾಗಿದ್ದು, ಉಭಯ ದೇಶಗಳು ಈ ವಿಚಾರದಲ್ಲಿ ಎಷ್ಟು ಗಂಭೀರವಾಗಿವೆ ಎನ್ನುವುದನ್ನು ಸೂಚಿಸುತ್ತದೆ. ಈ ಸಹಭಾಗಿತ್ವದ ಅತ್ಯಂತ ಮುಖ್ಯ ಭಾಗಗಳಲ್ಲಿ ಒಂದೆಂದರೆ, ಅದು ಮಿಷನ್ ಸುದರ್ಶನ್. ಸರಳವಾಗಿ ಹೇಳುವುದಾದರೆ, ಭಾರತಕ್ಕೆ ತನ್ನ ನಗರಗಳು ಮತ್ತು ಪ್ರಮುಖ ಪ್ರದೇಶಗಳ ಮೇಲೆ ಒಂದು ರಕ್ಷಣಾ ಕವಚ ನಿರ್ಮಿಸುವ ಗುರಿ ಇದೆ. ಈ ಮೂಲಕ, ಯಾರಾದರೂ ಶತ್ರುಗಳು ಭಾರತದ ಮೇಲೆ ಕ್ಷಿಪಣಿ ಪ್ರಯೋಗಿಸಿದರೆ, ಅದು ನೆಲಕ್ಕೆ ಇಳಿಯುವ ಮುನ್ನವೇ ಆಗಸದಲ್ಲಿ ನಾಶವಾಗಲಿದೆ. ಇಂತಹ ಯೋಜನೆ ರೂಪಿಸುವಲ್ಲಿ, ಇಸ್ರೇಲ್ ಜಗತ್ತಿನಲ್ಲೇ ಅತ್ಯುತ್ತಮ ಸಾಧನೆ ತೋರಿರುವ ದೇಶಗಳಲ್ಲಿ ಪ್ರಮುಖವಾಗಿದೆ. ಇಸ್ರೇಲ್ ದೀರ್ಘ ವ್ಯಾಪ್ತಿಯ ಅಪಾಯಗಳಿಗೆ ಆಯರೋ ವ್ಯವಸ್ಥೆ, ಮಧ್ಯಮ ವ್ಯಾಪ್ತಿಯ ಅಪಾಯಗಳಿಗೆ ಡೇವಿಡ್ಸ್ ಸ್ಲಿಂಗ್, ಮತ್ತು ಸಣ್ಣ ವ್ಯಾಪ್ತಿಯ ಅಪಾಯಗಳನ್ನು ಎದುರಿಸಲು ಜಗತ್ ವಿಖ್ಯಾತವಾದ ಐರನ್ ಡೋಮ್ ರಕ್ಷಣಾ ವ್ಯವಸ್ಥೆಗಳನ್ನು ಹೊಂದಿದೆ. ಕಳೆದ ಜೂನ್ ತಿಂಗಳಲ್ಲಿ, ಇರಾನ್ ಅಪಾರ ಸಂಖ್ಯೆಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಇಸ್ರೇಲ್ ಮೇಲೆ ಪ್ರಯೋಗಿಸಿತ್ತು. ಆದರೆ, ಪ್ರಯೋಗಿಸಿದ ಪ್ರತಿ 100 ಕ್ಷಿಪಣಿಗಳ ಪೈಕಿ 98 ಕ್ಷಿಪಣಿಗಳನ್ನು ಆಗಸದಲ್ಲೇ ಹೊಡೆದುರುಳಿಸಲಾಯಿತು. ಇಸ್ರೇಲಿನ ರಕ್ಷಣಾ ಕವಚ ಇಷ್ಟು ಪರಿಣಾಮಕಾರಿಯಾಗಿದೆ. ಭಾರತ ತನ್ನ ಜನರಿಗಾಗಿ ಇದೇ ರೀತಿಯ ರಕ್ಷಣಾ ವ್ಯವಸ್ಥೆಯನ್ನು ಹೊಂದಲು ಬಯಸಿದೆ ಎಂದು ಹೇಳಲಾಗಿದೆ.