ಕಂದಹಾರ್ : ಪಾಕಿಸ್ತಾನವು ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿ, ಅಫ್ಘಾನಿಸ್ತಾನದ ಏಳು ಸ್ಥಳಗಳಲ್ಲಿ ನಿನ್ನೆ ಮಧ್ಯರಾತ್ರಿ ವೈಮಾನಿಕ ದಾಳಿ ನಡೆಸಿದೆ. ಮೊದಲ ದಾಳಿಯು ಅಫ್ಘಾನಿಸ್ತಾನದ ಪಕ್ತಿಕಾ ಪ್ರಾಂತ್ಯದ ಬರ್ಮಲ್ ನಗರದ ಮದರಸಾವನ್ನು ಗುರಿಯಾಗಿಸಿಕೊಂಡು ಹಲವಾರು ಧಾರ್ಮಿಕ ಪುಸ್ತಕಗಳನ್ನು ಸುಟ್ಟುಹಾಕಿದೆ. ಅಫ್ಘಾನ್ ತಾಲಿಬಾನ್ ಅಧಿಕಾರಿಗಳು ಹಾನಿಯನ್ನು ನಿರ್ಣಯಿಸುತ್ತಿದ್ದು, ಈ ದಾಳಿಗೆ ಸುಮ್ಮನಿರುವ ಮಾತೇ ಇಲ್ಲ, ಪ್ರತೀಕಾರದ ಎಚ್ಚರಿಕೆಯನ್ನು ನೀಡಿದ್ದಾರೆ. ಈ ದಾಳಿಯಿಂದ ಗಡಿಯಲ್ಲಿ ಉದ್ವಿಗ್ನತೆಯ ತೀವ್ರ ಏರಿಕೆಗೆ ಕಾರಣವಾಗಬಹುದು ಎಂದು ಬಲ್ಲ ಮೂಲಗಳನ್ನು ಉಲ್ಲೇಖಿಸಿ ಸಿಎನ್‌ಎನ್-ನ್ಯೂಸ್ 18 ವರದಿ ಮಾಡಿದೆ. ಪೂರ್ವ ಮತ್ತು ಆಗ್ನೇಯ ಅಫ್ಘಾನಿಸ್ತಾನದಲ್ಲಿ ನಡೆದ ಈ ದಾಳಿಗಳಲ್ಲಿ ಕನಿಷ್ಠ 28 ಟಿಟಿಪಿ ಯೋಧರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ದೃಢಪಡಿಸಿವೆ.
ಅಫ್ಘಾನ್ ತಾಲಿಬಾನ್‌ಗೆ ಹತ್ತಿರವಿರುವ ಮೂಲವೊಂದು ತಾಲಿಬಾನ್‌ಗೆ ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಎಲ್ಲ ಹಕ್ಕಿದೆ ತಿಳಿಸಿದೆ. ನಾವು ಪಾಕಿಸ್ತಾನದ ದಾಳಿಗಳನ್ನು ನಿರ್ಣಯಿಸುತ್ತಿದ್ದೇವೆ ಮತ್ತು ದಾಳಿಯಿಂದ ಉಂಟಾದ ಹಾನಿಯನ್ನು ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ. 'ಪಾಕಿಸ್ತಾನವು ಅಫಘಾನ್ ಸಾರ್ವಭೌಮತ್ವವನ್ನು ಉಲ್ಲಂಘಿಸಿದೆ ಎಂದು ಮೂಲಗಳು ಆರೋಪಿಸಿದವು. ಪಾಕಿಸ್ತಾನವು ಅಫಘಾನ್ ವಾಯುಪ್ರದೇಶವನ್ನು ಉಲ್ಲಂಘಿಸಿದೆ ಎಂದು ಅವರು ಹೇಳಿದ್ದು, ತಾಲಿಬಾನ್‌ಗೆ ಪ್ರತೀಕಾರ ತೀರಿಸಿಕೊಳ್ಳುವ ಎಲ್ಲ ಹಕ್ಕಿದೆ ಎಂದು ಒತ್ತಿ ಹೇಳಿದ್ದಾರೆ. ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ ಸರಿಯಾದ ಸಮಯದಲ್ಲಿ ನಾವು ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಅವರು ಹೇಳಿದರು. ದಾಳಿಯ ನಂತರ, ಹಿರಿಯ ತಾಲಿಬಾನ್ ನಾಯಕರು ತುರ್ತು ಸಮಾಲೋಚನಾ ಸಭೆಗಳನ್ನು ಕರೆದಿದ್ದಾರೆ. ಮೂಲದ ಪ್ರಕಾರ, ಉನ್ನತ ನಾಯಕತ್ವವು ಪರಿಸ್ಥಿತಿಯನ್ನು ಚರ್ಚಿಸಲು ಕಾಬೂಲ್ ಮತ್ತು ಕಂದಹಾರ್‌ನಲ್ಲಿ ಪ್ರಮುಖ ಸಭೆಗಳನ್ನು ಕರೆದಿದೆ.
ಪಾಕಿಸ್ತಾನವು ಅಸ್ತಿತ್ವದಲ್ಲಿರುವ ಒಪ್ಪಂದಗಳನ್ನು ಉಲ್ಲಂಘಿಸುತ್ತಿದೆ ಎಂದು ತಾಲಿಬಾನ್ ಆರೋಪಿಸಿದೆ. 'ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘಿಸಿದೆ. ಸೌದಿ ಅರೇಬಿಯಾ, ಕತಾರ್ ಮತ್ತು ಟರ್ಕಿಯೆ ಸೇರಿದಂತೆ ಎಲ್ಲಾ ಮಧ್ಯವರ್ತಿಗಳಿಗೆ ನಾವು ಮಾಹಿತಿ ನೀಡುತ್ತಿದ್ದೇವೆ' ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನದ ಭದ್ರತಾ ಮೂಲಗಳು ಹೇಳುವಂತೆ ಗಡಿಯಾಚೆಗಿನ ಕಾರ್ಯಾಚರಣೆಯು ಭಯೋತ್ಪಾದಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡಿದೆ. ನಿಖರವಾದ ದಾಳಿಗಳು ಪಕ್ತಿಕಾ, ಪಕ್ತಿಯಾ, ನಂಗರ್‌ಹಾರ್ ಮತ್ತು ಖೋಸ್ಟ್ ಪ್ರಾಂತ್ಯಗಳಲ್ಲಿನ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿವೆ ಎಂದು ಅವರು ಹೇಳಿದರು. ಪಾಕಿಸ್ತಾನವು ಮುಂಜಾನೆ ಅಫ್ಘಾನಿಸ್ತಾನದೊಳಗೆ ವಾಯುದಾಳಿ ನಡೆಸಿತು, ಡುರಾಂಡ್ ರೇಖೆಯ ಉದ್ದಕ್ಕೂ ಹಲವಾರು ಸ್ಥಾನಗಳನ್ನು ಗುರಿಯಾಗಿಸಿಕೊಂಡಿತು. ಶಂಕಿತ ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಅಡಗುತಾಣಗಳ ಮೇಲೂ ಫೈಟರ್ ಜೆಟ್‌ಗಳು ದಾಳಿ ನಡೆಸಿದವು.