image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಶೇ. 10 ರಷ್ಟು ಜಾಗತಿಕ ಸುಂಕವನ್ನು ವಿಧಿಸುವುದಾಗಿ ಘೋಷಿಸಿದ ಡೊನಾಲ್ಡ್ ಟ್ರಂಪ್

ಶೇ. 10 ರಷ್ಟು ಜಾಗತಿಕ ಸುಂಕವನ್ನು ವಿಧಿಸುವುದಾಗಿ ಘೋಷಿಸಿದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್​: ಡೊನಾಲ್ಡ್ ಟ್ರಂಪ್ ಜಾಗತಿಕ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುವಂತಹ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದ್ದು, ಅಮೆರಿಕಾಗೆ ಆಮದು ಮಾಡಿಕೊಳ್ಳಲಾಗುವ ಸರಕುಗಳ ಮೇಲೆ ತಾತ್ಕಾಲಿಕವಾಗಿ ಶೇ. 10 ರಷ್ಟು ಜಾಗತಿಕ ಸುಂಕವನ್ನು ವಿಧಿಸುವುದಾಗಿ ಘೋಷಿಸಿದ್ದಾರೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ವ್ಯಾಪಾರ ಸುಂಕಗಳನ್ನು ಪುನಃಸ್ಥಾಪಿಸಲು ತ್ವರಿತವಾಗಿ ಕ್ರಮ ಕೈಗೊಳ್ಳುತ್ತಿದ್ದಾರೆ ಎನ್ನಲಾಗಿದ್ದು. ತಮ್ಮ ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, ಎಲ್ಲಾ ದೇಶಗಳ ಮೇಲೆ ಶೇ.10 ರಷ್ಟು ಜಾಗತಿಕ ಸುಂಕಕ್ಕೆ ಓವಲ್ ಕಚೇರಿಯಿಂದ ಸಹಿ ಹಾಕಲು ನನಗೆ ಸಂತೋಷವಾಗುತ್ತಿದ್ದು, ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಹೇಳಿದರು.

ಈ ಹೊಸ ಸುಂಕವು 150 ದಿನಗಳವರೆಗೆ ಜಾರಿಯಲ್ಲಿರಲಿದೆ ಎನ್ನಲಾಗಿದ್ದು, 1977 ರ ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ (IEEPA) ಅಡಿಯಲ್ಲಿ ವಿಧಿಸಲಾದ ಸುಂಕಗಳನ್ನು ಸುಪ್ರೀಂ ಕೋರ್ಟ್ ಅಮಾನ್ಯಗೊಳಿಸಿದ ಬಳಿಕ ಟ್ರಂಪ್ ಕಡೆಯಿಂದ ಈ ಘೋಷಣೆ ಹೊರಬಿದ್ದಿದೆ. ಈ ಹಿಂದಿನ ಸುಂಕಗಳು 10% ರಿಂದ 50% ವರೆಗೆ ಇದ್ದವು. ಈ ಕ್ರಮಗಳು ನಮ್ಮ ದೇಶವನ್ನು ಇತರ ದೇಶಗಳು ಮತ್ತು ಕಂಪನಿಗಳ ಅನ್ಯಾಯದ ವ್ಯಾಪಾರ ಪದ್ಧತಿಗಳಿಂದ ರಕ್ಷಿಸುವ ಸಲುವಾಗಿವೆ ಎಂದು ಟ್ರಂಪ್​ ಹೇಳಿಕೊಂಡಿದ್ದು, ನಮ್ಮಲ್ಲಿ ಪರ್ಯಾಯ ಮತ್ತು ಉತ್ತಮ ಮಾರ್ಗಗಳಿವೆ. ನಾವು ಹೆಚ್ಚಿನ ಹಣವನ್ನು ತೆಗೆದುಕೊಳ್ಳುತ್ತೇವೆ, ಆದ್ದರಿಂದಲೇ ನಾವು ಹೆಚ್ಚು ಬಲಶಾಲಿಯಾಗುತ್ತೇವೆ ಎಂದು ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅಮೆರಿಕಾ ಅಧ್ಯಕ್ಷರು, ಹೊಸ ಸುಂಕಗಳನ್ನು ತರಲು 1974 ರ ವ್ಯಾಪಾರ ಕಾಯ್ದೆಯ ಸೆಕ್ಷನ್ 122 ಬಳಸುತ್ತಿರುವುದಾಗಿ ತಿಳಿಸಿದರು. ವಿರಳವಾಗಿ ಬಳಸಲಾಗುವ ನಿಬಂಧನೆಯು ಗಂಭೀರ ಪಾವತಿ ಸಮತೋಲನ ಸಮಸ್ಯೆಗಳನ್ನು ಪರಿಹರಿಸಲು 150 ದಿನಗಳವರೆಗೆ 15% ವರೆಗೆ ಸುಂಕವನ್ನು ವಿಧಿಸಲು ಅನುವು ಮಾಡಿಕೊಡುತ್ತದೆ ಎಂದು ಟ್ರಂಪ್​ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ