ಅಮೇರಿಕ : ಅಮೆರಿಕ ಮೂಲದ ಪ್ರಸಿದ್ಧ ಎಐ ಸ್ಟಾರ್ಟ್‌ಅಪ್ 'ಆಂಥ್ರೋಪಿಕ್' ಇತ್ತೀಚೆಗೆ ಬಿಡುಗಡೆ ಮಾಡಿದ ಹೊಸ ಎಐ ಟೂಲ್ ಈ ಎಲ್ಲಾ ಗದ್ದಲಗಳಿಗೆ ಕೇಂದ್ರಬಿಂದುವಾಗಿದೆ. ಈ ತಂತ್ರಜ್ಞಾನವು ಕೇವಲ ಚಾಟ್ ಮಾಡುವುದಕ್ಕೆ ಸೀಮಿತವಾಗದೆ, ಕಾರ್ಪೊರೇಟ್ ಕಂಪನಿಗಳ ಕಾನೂನು ಪಾಲನೆ, ಸಂಕೀರ್ಣ ಕಾಂಟ್ರ್ಯಾಕ್ಟ್‌ಗಳ ಪರಿಶೀಲನೆ ಮತ್ತು ಡೇಟಾ ವಿಶ್ಲೇಷಣೆಯಂತಹ ಗಂಭೀರ ಕೆಲಸಗಳನ್ನು ಮನುಷ್ಯರಿಗಿಂತ ವೇಗವಾಗಿ ಮತ್ತು ನಿಖರವಾಗಿ ಮಾಡಬಲ್ಲದು. ಈ ಬೆಳವಣಿಗೆಯು ಭಾರತದಂತಹ ದೇಶಗಳ ಮೇಲೆ ಅವಲಂಬಿತವಾಗಿರುವ ಜಾಗತಿಕ 'ಐಟಿ ಔಟ್‌ಸೋರ್ಸಿಂಗ್' ಉದ್ಯಮದ ಅಡಿಪಾಯವನ್ನೇ ಅಲುಗಾಡಿಸಬಹುದು ಎಂಬ ಭೀತಿ ಹೂಡಿಕೆದಾರರಲ್ಲಿ ಮೂಡಿದೆ. ಐಟಿ ಕಂಪನಿಗಳ ಬಹುಪಾಲು ಆದಾಯವು ಅಮೆರಿಕ ಮತ್ತು ಯುರೋಪ್‌ನ ಕಂಪನಿಗಳ ಬ್ಯಾಕ್-ಆಫೀಸ್ ಕೆಲಸಗಳಿಂದ ಬರುತ್ತದೆ. ಈಗ ಆ ಕೆಲಸಗಳನ್ನು ಎಐ ತಾನಾಗಿಯೇ ಮಾಡಲು ಶುರು ಮಾಡಿದರೆ, ಈ ಕಂಪನಿಗಳ ಅಗತ್ಯವೇನು? ಎಂಬ ಪ್ರಶ್ನೆಯೇ ಷೇರುಗಳ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಇದರ ಜೊತೆಗೆ, ಅಮೆರಿಕದ ಫೆಡರಲ್ ರಿಸರ್ವ್ ಸದ್ಯಕ್ಕೆ ಬಡ್ಡಿದರ ಕಡಿತಗೊಳಿಸುವುದಿಲ್ಲ ಎಂಬ ಸುಳಿವು ನೀಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದು ರಫ್ತು ಆಧಾರಿತ ಭಾರತೀಯ ಐಟಿ ಕಂಪನಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಮುಲಗಳಿಂದ ವರದಿಯಾಗಿದೆ.
ಅಮೆರಿಕದ ಪ್ರಮುಖ ಸೂಚ್ಯಂಕಗಳಾದ 'ಎಸ್ & ಪಿ 500' ಮತ್ತು 'ನಾಸ್ಡಾಕ್' ಕ್ರಮವಾಗಿ ಶೇ. 1.6 ಮತ್ತು ಶೇ. 2ರಷ್ಟು ಕುಸಿತ ಕಂಡಿವೆ. ಜಪಾನ್‌ನ ನಿಕೈ ಸೂಚ್ಯಂಕ ಕೂಡ ಭಾರಿ ನಷ್ಟ ಅನುಭವಿಸಿದೆ. ಈ ಅಸ್ಥಿರತೆಯ ನಡುವೆ ಹೂಡಿಕೆದಾರರು ತಮ್ಮ ಹಣವನ್ನು ಸುರಕ್ಷಿತವಾಗಿರಿಸಲು ಅಮೆರಿಕ ಸರ್ಕಾರದ ಬಾಂಡ್‌ಗಳತ್ತ ಮುಖ ಮಾಡುತ್ತಿದ್ದಾರೆ. ಇನ್ನು ಚಿನ್ನದ ಬೆಲೆ ಶೇ. 3ರಷ್ಟು ಇಳಿಕೆ ಕಂಡಿದ್ದರೂ ಇಂದು ಸ್ಥಿರತೆ ಕಾಪಾಡಿಕೊಂಡಿದೆ. ಕುತೂಹಲಕಾರಿ ಸಂಗತಿಯೆಂದರೆ, ಡಿಜಿಟಲ್ ಕರೆನ್ಸಿ ಬಿಟ್‌ಕಾಯಿನ್ ಸ್ವಲ್ಪ ಮಟ್ಟದ ಚೇತರಿಕೆ ಕಂಡಿದೆ. ಸಿಂಗಾಪುರದ 'ವ್ಯಾಂಟೇಜ್ ಪಾಯಿಂಟ್ ಅಸೆಟ್ ಮ್ಯಾನೇಜ್‌ಮೆಂಟ್' ಸಂಸ್ಥೆಯ ಮುಖ್ಯ ಹೂಡಿಕೆ ಅಧಿಕಾರಿ ನಿಕ್ ಫೆರೆಸ್ ಅವರ ಎಚ್ಚರಿಕೆ ಈಗ ಉದ್ಯಮದಲ್ಲಿ ಸಂಚಲನ ಮೂಡಿಸಿದೆ. ಅವರು ಈಗಿನ ಸ್ಥಿತಿಯನ್ನು 2008ರ ಜಾಗತಿಕ ಹಣಕಾಸು ಬಿಕ್ಕಟ್ಟಿಗೆ ಹೋಲಿಸಿದ್ದಾರೆ. '2008ರಲ್ಲಿ ಸಾಲದ ಸುಳಿಯಿಂದಾಗಿ ಬ್ಯಾಂಕುಗಳು ಹೇಗೆ ಅಸ್ತಿತ್ವದ ಹೋರಾಟ ನಡೆಸಿದವೋ, ಅದೇ ರೀತಿಯ ಪರಿಸ್ಥಿತಿಯನ್ನು ಈಗ ಸಾಫ್ಟ್‌ವೇರ್ ಮತ್ತು ಐಟಿ ಸೇವಾ ಕಂಪನಿಗಳು ಎದುರಿಸುತ್ತಿವೆ. ಎಐ ತಂತ್ರಜ್ಞಾನವು ಈ ಕಂಪನಿಗಳ ಸಾಂಪ್ರದಾಯಿಕ ಆದಾಯದ ಮೂಲವನ್ನೇ ಕಬಳಿಸುತ್ತಿದೆ' ಎಂದು ಅವರು ವಿಶ್ಲೇಷಿಸಿದ್ದಾರೆ. ಒಟ್ಟಾರೆಯಾಗಿ, ಎಐ ತಂತ್ರಜ್ಞಾನವು ಜಗತ್ತಿಗೆ ಹೊಸ ಹಾದಿ ತೋರಿಸುತ್ತದೋ ಅಥವಾ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುವ ಐಟಿ ಕ್ಷೇತ್ರವನ್ನು ಮೂಲೆಗುಂಪು ಮಾಡುತ್ತದೋ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ. ಅಲ್ಲಿಯವರೆಗೆ ಮಾರುಕಟ್ಟೆಯಲ್ಲಿನ ಈ ಅನಿಶ್ಚಿತತೆ ಮುಂದುವರಿಯುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಮಾಹಿತಿ ನೀಡಿದ್ದಾರೆ.