image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಅಹಮದಾಬಾದ್​ನ ವಿಮಾನ ದುರಂತ ಉದ್ದೇಶ ಪೂರ್ವಕ : ಇಟಲಿ ಮಾಧ್ಯಮ!

ಅಹಮದಾಬಾದ್​ನ ವಿಮಾನ ದುರಂತ ಉದ್ದೇಶ ಪೂರ್ವಕ : ಇಟಲಿ ಮಾಧ್ಯಮ!

ನವದೆಹಲಿ: ಭಾರತದ ವಾಯುಯಾನ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ ಗುಜರಾತ್​ನ ಅಹಮದಾಬಾದ್​ನಲ್ಲಿ ಕಳೆದ ವರ್ಷ ಜೂನ್​ 12 ರಂದು ಸಂಭವಿಸಿತು. ಈ ಘಟನೆ ನಡೆದು ಸುಮಾರು 8 ತಿಂಗಳು ಕಳೆದಿದ್ದು, ಇದೀಗ ಆಘಾತಕಾರಿ ಸಂಗತಿಯೊಂದು ವರದಿಯಾಗಿದೆ.  242 ಪ್ರಯಾಣಿಕರು ಹಾಗೂ 24 ವೈದ್ಯಕೀಯ ವಿದ್ಯಾರ್ಥಿಗಳ ಸಾವಿಗೆ ಕಾರಣವಾದ ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳಲ್ಲಿ ಓರ್ವ ಪೈಲಟ್​, ಉದ್ದೇಶಪೂರ್ವಕವಾಗಿಯೇ ಅಂದರೆ, ಬೇಕಂತಲೇ ವಿಮಾನದ ಇಂಧನ ಸ್ವಿಚ್‌ಗಳನ್ನು ಆಫ್ ಮಾಡಿದರಂತೆ. ಈ ಆಘಾತಕಾರಿ ವಿಚಾರವನ್ನು ಇಟಾಲಿಯನ್ ಪತ್ರಿಕೆ ಕೊರಿಯೆರ್ ಡೆಲ್ಲಾ ಸೆರಾ ಇತ್ತೀಚೆಗೆ ವರದಿ ಮಾಡಿದೆ. ವಿಮಾನದ ಕಾಕ್‌ಪಿಟ್‌ನಿಂದ ಬಂದ ಧ್ವನಿ ರೆಕಾರ್ಡಿಂಗ್‌ಗಳ ವಿಶ್ಲೇಷಣೆಯಿಂದ ಈ ಸಂಗತಿ ಬಯಲಾಗಿದೆ ಎಂದು ಪತ್ರಿಕೆ ಹೇಳಿದೆ. ಏರ್ ಇಂಡಿಯಾ ವಿಮಾನ ಅಪಘಾತದ ಬಗ್ಗೆ ನಡೆಯುತ್ತಿರುವ ತನಿಖೆ ಅಂತಿಮ ಹಂತಕ್ಕೆ ಬಂದಿದ್ದು, ಈ ದುರಂತವು ತಾಂತ್ರಿಕ ದೋಷದಿಂದ ಉಂಟಾಗಿಲ್ಲ, ಬದಲಾಗಿ "ಉದ್ದೇಶಪೂರ್ವಕ ಕೃತ್ಯ"ದ ಪರಿಣಾಮ ಎಂದು ತನಿಖಾಧಿಕಾರಿಗಳು ತೀರ್ಮಾನಿಸಿದ್ದಾರೆ ಎನ್ನುವ ಭಾರತ ಮತ್ತು ಅಮೆರಿಕ ನಡುವಿನ ಇತ್ತೀಚಿನ ಚರ್ಚೆಗಳ ಬಗ್ಗೆ ತಿಳಿದಿರುವಂತಹ ಎರಡು ಮೂಲಗಳನ್ನು ಉಲ್ಲೇಖಿಸಿ ಇಟಾಲಿಯನ್ ದಿನಪತ್ರಿಕೆ ಕೊರಿಯೆರ್ ಡೆಲ್ಲಾ ಸೆರಾ ವರದಿ ಮಾಡಿದೆ. 

ಈ ಅಪಘಾತದ ಹಿಂದೆ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಕೈವಾಡ ಇರುವುದಾಗಿ ಶಂಕಿಸಲಾಗಿದೆ. ಏಕೆಂದರೆ, ಅಪಘಾತಕ್ಕೂ ಮುನ್ನ ಒಂದು ತಿಂಗಳಿಂದ ಸಭರ್ವಾಲ್​ ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎಂಬ ಸಂಗತಿ ತನಿಖೆಯಲ್ಲಿ ಬಯಲಾಗಿತ್ತು. ಯಾವಾಗ ಭಾರತದ ವಿಮಾನ ಅಪಘಾತ ತನಿಖಾ ಬ್ಯೂರೋ ವರದಿ ಹೊರ ಬಂತೋ, ಪೈಲಟ್‌ಗಳ ಸಂಘಗಳಿಂದ ಪ್ರತಿಭಟನೆಗೆ ಕಾರಣವಾಯಿತು. ಏಕೆಂದರೆ, ವರದಿಯಲ್ಲಿ ಪೈಲಟ್​ಗಳದ್ದೇ ತಪ್ಪು ಎಂದು ಉಲ್ಲೇಖಿಸಲಾಗಿತ್ತು. ಸಭರ್ವಾಲ್ ಅವರ ತಂದೆ ಕೂಡ ತಮ್ಮ ಮಗನ ವಿರುದ್ಧದ ಆರೋಪಗಳನ್ನು ತಿರಸ್ಕರಿಸಿ, ಹೊಸ ತನಿಖೆಗೆ ಒತ್ತಾಯಿಸಿದರು. ತಮ್ಮ ಮಗನ ಮಾನಸಿಕ ಆರೋಗ್ಯದ ಬಗ್ಗೆ ಎದ್ದಿದ್ದ ಊಹಾಪೋಹಗಳನ್ನು ತಳ್ಳಿಹಾಕಿದ್ದರು.  ಕೊರಿಯೆರ್ ಡೆಲ್ಲಾ ಸೆರಾ ಪ್ರಕಾರ, ಅಂತಿಮ ತನಿಖಾ ವರದಿಯು ಪೈಲಟ್‌ಗಳ ನಿರಂತರ ಮಾನಸಿಕ ಮೌಲ್ಯಮಾಪನ ಮತ್ತು ಮಾನಸಿಕ ಆರೋಗ್ಯ ಮೇಲ್ವಿಚಾರಣೆಯ ಶಿಫಾರಸುಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಸದ್ಯ ಡೆಲ್ಲಾ ಸೆರಾ ವರದಿ ತೀವ್ರ ಸಂಚಲನ ಮೂಡಿಸಿದೆ. ಆದರೆ, ಅಂತಿಮ ವರದಿ ಬರುವವರೆಗೂ ಈ ವಿಚಾರದಲ್ಲಿ ಅಂತಿಮ ತೀರ್ಮಾನಕ್ಕೆ ಬರಲಾಗದು ಎಂದು ವಿಮಾನಯಾನ ಸಂಸ್ಥೆಯ ತನಿಖಾ ಇಲಾಖೆ ತಿಳಿಸಿದೆ.

Category
ಕರಾವಳಿ ತರಂಗಿಣಿ