image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಜಾರಿ : ರಷ್ಯಾ ಕೆಂಡಾಮಂಡಲ

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಜಾರಿ : ರಷ್ಯಾ ಕೆಂಡಾಮಂಡಲ

ಮಾಸ್ಕೋ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಜಾರಿಗೆ ನಿರೀಕ್ಷೆಯಂತೆ ರಷ್ಯಾ ಕೆಂಡಾಮಂಡಲವಾಗಿದೆ. ಅದರಲ್ಲೂ ಭಾರತವು ತನ್ನಿಂದ ಕಚ್ಚಾತೈಲ ಖರೀದಿ ನಿಲ್ಲಿಸುವಂತೆ ಅಮೆರಿಕ ಹೇರಿರುವ ಒತ್ತಡವನ್ನು, ರಷ್ಯಾ ತೀವ್ರವಾಗಿ ಖಂಡಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಠಕ್ಕೆ ಬಿದ್ದು, ಭಾರತ-ರಷ್ಯಾ ತೈಲ ಸಂಬಂಧ ಹದೆಗೆಡಿಸಿದ್ದು, ರಷ್ಯಾದ ಕೋಪಕ್ಕೆ ಗುರಿಯಾಗಿದೆ. "ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ನಿಯಮದಂತೆ ಭಾರತವು ರಷ್ಯಾದಿಂದ ಕಚ್ಚಾತೈಲ ಖರೀದಿಯನ್ನು ನಿಲ್ಲಿಸಲಿದೆ" ಎಂಬ ಅಮೆರಿಕ ಹೇಳಿಕೆ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಆಡಳಿತವನ್ನು ಕೆರಳಿಸಿದೆ. ಯುಎಸ್‌ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೇಲಿನ ತನ್ನ ಕೋಪವನ್ನು ಕ್ರೆಮ್ಲಿನ್‌ ಹೊರಹಾಕಿದ್ದು, ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಜ್ವಾಲಾಮುಖಿಯಂತೆ ಸ್ಪೋಟಗೊಂಡಿದ್ದಾರೆ.

ಭಾರತ ಮತ್ತು ಇತರ ದೇಶಗಳು ರಷ್ಯಾದ ತೈಲ ಖರೀದಿಸುವುದನ್ನು ತಡೆಯಲು ಪ್ರಯತ್ನಿಸುತ್ತಿರುವ ಅಮೆರಿಕವನ್ನು, ರಷ್ಯಾ ತೀವ್ರವಾಗಿ ತರಾಟೆಗೆ ತೆಗೆದುಕೊಂಡದೆ. ಈ ಕುರಿತು ಮಾತನಾಡಿರುವ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್, "ಆರ್ಥಿಕ ಪ್ರಾಬಲ್ಯ ಸಾಧಿಸಲು ಸುಂಕಗಳು, ನಿರ್ಬಂಧಗಳು ಮತ್ತು ನೇರ ನಿಷೇಧಗಳಂತಹ ಬಲವಂತದ ಕ್ರಮಗಳನ್ನು ಟೀಮ್ ಟ್ರಂಪ್ ಬಳಸುತ್ತಿದೆ" ಎಂದು ಆರೋಪಿಸಿದ್ದಾರೆ. "ಬ್ರಿಕ್ಸ್ ಟಿವಿ" ಜೊತೆ ಮಾತನಾಡಿದ ರಷ್ಯಾದ ವಿದೇಶಾಂಗ ಸಚಿವರು, "ಕಳೆದ ವರ್ಷ ಡೊನಾಲ್ಡ್‌ ಟ್ರಂಪ್ ಮತ್ತು ವ್ಲಾಡಿಮಿರ್ ಪುಟಿನ್ ನಡುವಿನ ಅಲಾಸ್ಕಾ ಮಾತುಕತೆಯ ಸಮಯದಲ್ಲಿ, ಉಕ್ರೇನ್ ಕುರಿತು ವಾಷಿಂಗ್ಟನ್‌ ಪ್ರಸ್ತಾಪವನ್ನು ಮಾಸ್ಕೋ ಒಪ್ಪಿಕೊಂಡಿತ್ತು. ಆದಾಗ್ಯೂ ನಮ್ಮ ಮೇಲೆ ಹೊಸ ನಿರ್ಬಂಧಗಳನ್ನು ವಿಧಿಸಲಾಯಿತು" ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

Category
ಕರಾವಳಿ ತರಂಗಿಣಿ