ಪೋಲೆಂಡ್ : ಉಕ್ರೇನ್ ಹಾಗೂ ರಷ್ಯಾದ ನಡುವಿನ ಯುದ್ಧವು ನಾಲ್ಕು ವರ್ಷಗಳ ಸನಿಹದಲ್ಲಿದ್ದು, ಇದುವರೆಗೂ ಒಂದು ತಾರ್ಕಿಕ ಅಂತ್ಯಕ್ಕೆ ಬರುವಲ್ಲಿ ಎರಡು ರಾಷ್ಟ್ರಗಳು ವಿಫಲವಾಗಿವೆ. ಇನ್ನು ಈ ಸಂಘರ್ಷದಿಂದ ಇದುವರೆಗೂ ಲಕ್ಷಾಂತರ ಜನರು ಸಾವನ್ನಪ್ಪಿದ್ದರೆ, ಕೋಟ್ಯಾಂತರ ಜನರು ನಿರ್ಗತಿಕರಾಗಿದ್ದಾರೆ. ಮತ್ತೊಂದೆಡೆ, ಯುದ್ಧವನ್ನ ನಿಲ್ಲಿಸಲು ವಿಶ್ವದ ದೊಡ್ಡಣ್ಣ ಎನಿಸಿಕೊಂಡ ದೇಶಗಳೇ ಅಸಹಾಯಕವಾಗಿ ನಿಂತಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಶಾಂತಿಗಾಗಿ ಮಹತ್ವದ ಹೆಜ್ಜೆ ಇಟ್ಟಿದ್ದರು ಎಂಬ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷ ತಾರಕಕ್ಕೇರಿ, ಪರಮಾಣು ದಾಳಿಯ ಭೀತಿ ಎದುರಾದಾಗ ಪ್ರಧಾನಿ ಮೋದಿ ಅವರು ನಡೆಸಿದ ಆ ಒಂದು ಫೋನ್ ಕರೆ ಇಡೀ ಜಗತ್ತನ್ನೇ ಸಂಕಷ್ಟದಿಂದ ಪಾರು ಮಾಡಿದೆ ಎಂದು ಪೋಲೆಂಡ್ ದೇಶದ ಪ್ರಮುಖ ನಾಯಕರೊಬ್ಬರು ಬಹಿರಂಗಪಡಿಸಿದ್ದಾರೆ.
ಪೋಲೆಂಡ್ ದೇಶದ ಉಪ ವಿದೇಶಾಂಗ ಸಚಿವ ವ್ಲಾಡಿಸ್ಲಾವ್ ಬಾರ್ಟೋಶೆವ್ಸ್ಕಿ ಅವರು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಪ್ರಧಾನಿ ಮೋದಿಯವರ ರಾಜತಾಂತ್ರಿಕ ಚಾಣಾಕ್ಷತೆಯನ್ನು ಶ್ಲಾಘಿಸಿ, "2022ರ ಅಂತ್ಯದ ವೇಳೆಗೆ ರಷ್ಯಾ ಮತ್ತು ಉಕ್ರೇನ್ ಯುದ್ಧ ಭೀಕರ ರೂಪ ಪಡೆದುಕೊಂಡಿತ್ತು. ಆ ಸಮಯದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಮೇಲೆ ಸಣ್ಣ ಪ್ರಮಾಣದ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಲು ಗಂಭೀರವಾಗಿ ಆಲೋಚಿಸಿದ್ದರು. ಈ ಸುಳಿವು ಸಿಗುತ್ತಿದ್ದಂತೆ ಪ್ರಧಾನಿ ಮೋದಿ ಅವರು ಪುಟಿನ್ ಅವರೊಂದಿಗೆ ನೇರವಾಗಿ ಮಾತನಾಡಿ, ಇಂತಹ ಅಪಾಯಕಾರಿ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು" ಎಂದು ಬಾರ್ಟೋಶೆವ್ಸ್ಕಿ ತಿಳಿಸಿದ್ದಾರೆ.
ಏತನ್ಮಧ್ಯೆ, ಸುಮಾರು 45 ವರ್ಷಗಳ ಸುದೀರ್ಘ ಅಂತರದ ನಂತರ ಪ್ರಧಾನಿ ಮೋದಿ ಅವರು 2024ರಲ್ಲಿ ಪೋಲೆಂಡ್ ಪ್ರವಾಸ ಕೈಗೊಂಡಿದ್ದರು. ಈ ಭೇಟಿಯು ಎರಡೂ ದೇಶಗಳ ನಡುವಿನ ಸಂಬಂಧದಲ್ಲಿ ಹೊಸ ಅಧ್ಯಾಯವನ್ನು ಬರೆದಿದೆ. ಈ ಸಂದರ್ಭದಲ್ಲಿ ರಕ್ಷಣೆ, ಡಿಜಿಟಲ್ ಉದ್ಯಮ, ಭದ್ರತೆ, ಬಾಹ್ಯಾಕಾಶ ಸಂಶೋಧನೆ ಮತ್ತು ಐಟಿ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಕುರಿತು ಹಲವು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಪೋಲೆಂಡ್ ಈಗ ಯುರೋಪಿಯನ್ ಒಕ್ಕೂಟದ ಭಾಗವಾಗಿರುವುದರಿಂದ, ಭಾರತದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದವು ಎರಡೂ ದೇಶಗಳ ಆರ್ಥಿಕತೆಗೆ ದೊಡ್ಡ ಬಲ ನೀಡಲಿದೆ ಎಂದು ವಿಶ್ಲೇಷಿಸಲಾಗಿದೆ. ಭಾರತವು ಸದ್ಯ ಜಿಡಿಪಿ ದೃಷ್ಟಿಯಿಂದ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತವು ಅತಿ ಶೀಘ್ರದಲ್ಲೇ ಮೂರನೇ ಸ್ಥಾನಕ್ಕೇರುವ ಗುರಿಯನ್ನು ಹೊಂದಿದೆ. ಸುಮಾರು 150 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಭಾರತವು ಜಗತ್ತಿನ ಅತಿ ದೊಡ್ಡ ಮತ್ತು ಸುಧಾರಿತ ಮಾರುಕಟ್ಟೆಯಾಗಿದೆ. ಅಮೆರಿಕ ಮತ್ತು ಭಾರತದ ನಡುವಿನ ವ್ಯಾಪಾರ ಒಪ್ಪಂದಗಳ ಬಗ್ಗೆಯೂ ಮಾತನಾಡಿರುವ ಪೋಲೆಂಡ್ ಸಚಿವರು, ಸುಂಕಗಳನ್ನು ಕಡಿಮೆ ಮಾಡುವುದು ಗ್ರಾಹಕರಿಗೆ ಲಾಭದಾಯಕವಾಗಿದ್ದು, ಭಾರತವು ಈ ನಿಟ್ಟಿನಲ್ಲಿ ಸರಿಯಾದ ಹಾದಿಯಲ್ಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.