ಪಾಕಿಸ್ತಾನ: ಪಾಕಿಸ್ತಾನದ ಹಲವಾರು ಸ್ಟಾರ್ ಕ್ರಿಕೆಟಿಗರು ತಮ್ಮ ಉದ್ಯಮಿಯೊಬ್ಬ ನಡೆಸುತ್ತಿದ್ದ ಪೊಂಜಿ ಯೋಜನೆಯಲ್ಲಿ ಭಾರಿ ಮೊತ್ತವನ್ನು ಹೂಡಿಕೆ ಮಾಡಿದರು. ಹಣವನ್ನು ದುರುಪಯೋಗಪಡಿಸಿಕೊಂಡು ಉದ್ಯಮಿ ದೇಶದಿಂದ ಪಲಾಯನ ಮಾಡಿದ್ದಾನೆ. ವರದಿಗಳ ಪ್ರಕಾರ, ಬಾಬರ್ ಅಜಮ್, ರಿಜ್ವಾನ್, ಶಾಹೀನ್ ಶಾ ಅಫ್ರಿದಿ, ಫಖರ್ ಜಮಾನ್, ಶಾದಾಬ್ ಖಾನ್ ಮತ್ತು ಇತರರು ಕಡಿಮೆ ಅವಧಿಯಲ್ಲಿ ದೊಡ್ಡ ಮೊತ್ತದ ಹಣವನ್ನು ಗಳಿಸುವ ಆಶಯದೊಂದಿಗೆ ಲಕ್ಷ ರೂ.ಹೂಡಿಕೆ ಮಾಡಿದರು. ಇವರಲ್ಲದೆ ಇತರ ಕೆಲವು ಹಿರಿಯ ಮತ್ತು ಕಿರಿಯ ಆಟಗಾರರು ಕೂಡ ಇದರಲ್ಲಿ ಹಣ ಹೂಡಿದ್ದರು ಎನ್ನಲಾಗಿದೆ. ಈ ಆಟಗಾರರು ಹೂಡಿಕೆ ಮಾಡಿದ್ದ ಹಣದ ಮೊತ್ತ ಸರಿಸುಮಾರು 100 ಕೋಟಿ ರೂಪಾಯಿಗಳಿಗೂ ಅಧಿಕವಾಗಿದೆ. ಅಧಿಕ ಲಾಭದ ಆಸೆಗೆ ಬಿದ್ದು ಈ ಹಗರಣದಲ್ಲಿ ಹಣ ತೊಡಗಿಸಿದ್ದರು ಎಂದು ತಿಳಿದುಬಂದಿದೆ. ಈ ಆಟಗಾರರಿಗೆ ರಿಯಲ್ ಎಸ್ಟೇಟ್ ಮತ್ತು ಇತರ ಆಕರ್ಷಕ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಿದರೆ ಅಲ್ಪಾವಧಿಯಲ್ಲಿ ದೊಡ್ಡ ಲಾಭ ಸಿಗುತ್ತದೆ ಎಂದು ನಂಬಿಸಲಾಗಿತ್ತು. ಆದರೆ, ಹೂಡಿಕೆ ಮಾಡಿದ ಸಂಸ್ಥೆಗಳು ಹಣದೊಂದಿಗೆ ಪರಾರಿಯಾಗಿವೆ ಅಥವಾ ಹೂಡಿಕೆ ಮುಳುಗಿದೆ ಎಂದು ಹೇಳಲಾಗುತ್ತಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಈ ಹಿಂದೆಯೇ ಆಟಗಾರರಿಗೆ ಇಂತಹ ಸಂಶಯಾಸ್ಪದ ಹೂಡಿಕೆ ಯೋಜನೆಗಳಿಂದ ದೂರವಿರುವಂತೆ ಎಚ್ಚರಿಕೆ ನೀಡಿತ್ತು. ಆದರೂ ಆಟಗಾರರು ವೈಯಕ್ತಿಕವಾಗಿ ಈ ಹೂಡಿಕೆಗಳನ್ನು ಮಾಡಿದ್ದರು. ಆಟಗಾರರು ರಿಯಲ್ ಎಸ್ಟೇಟ್ ಮತ್ತು ಕ್ರಿಪ್ಟೋಕರೆನ್ಸಿಯಂತಹ ಯೋಜನೆಗಳಲ್ಲಿ ಭಾರಿ ಮೊತ್ತದ ಹಣವನ್ನು ತೊಡಗಿಸಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಈ ಕಂಪನಿಗಳು ನಕಲಿ ಎಂದು ಈಗ ತಿಳಿದುಬಂದಿದೆ. ಮೈದಾನದಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಬೆನ್ನಲ್ಲೇ ಈ ಹಣಕಾಸಿನ ನಷ್ಟ ಉಂಟಾಗಿರುವುದು ಆಟಗಾರರ ಮೇಲೆ ಹೆಚ್ಚಿನ ಮಾನಸಿಕ ಒತ್ತಡವನ್ನು ಹೇರಿದೆ.ಈ ಬಗ್ಗೆ ಪಾಕಿಸ್ತಾನದ ಸ್ಟಾರ್ ಕ್ರಿಕೆಟಿಗರು ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲವಾದರೂ, ತಂಡದ ಆಂತರಿಕ ವಲಯದಲ್ಲಿ ಈ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಪೊಂಜಿ ಯೋಜನೆಯು ಒಂದು ರೀತಿಯ ಹೂಡಿಕೆ ವಂಚನೆಯಾಗಿದ್ದು, ಇದರಲ್ಲಿ ನಿಜವಾದ ಲಾಭದ ಬದಲು ಹೊಸ ಹೂಡಿಕೆದಾರರಿಂದ ಪಡೆದ ಹಣವನ್ನು ಬಳಸಿಕೊಂಡು ಹಿಂದಿನ ಹೂಡಿಕೆದಾರರಿಗೆ ಅದಾಯವನ್ನು ಪಾವತಿಸಲಾಗುತ್ತದೆ. ಹೊಸ ಇನ್ವೆಸ್ಟಮೆಂಟ್ ಇಲ್ಲದೆ ಇದ್ದಾಗ ಈ ಯೋಜನೆಯು ಕುಸಿಯುತ್ತದೆ, ಇದರಿಂದಾಗಿ ಅನೇಕರು ನಷ್ಟದಲ್ಲಿದ್ದಾರೆ ಎಂದು ವರದಿಯಾಗಿದೆ.