ನವದೆಹಲಿ : ಬಾಹ್ಯಾಕಾಶ ಲೋಕದಲ್ಲಿ ಚೀನಾ ಮತ್ತೆ ತನ್ನ ಹಿಡಿತ ಬಿಗಿ ಮಾಡಿಕೊಳ್ಳಲು ಮುಂದಾಗಿದೆ. ದೊಡ್ಡ ಮಟ್ಟದಲ್ಲಿ ಉಪಗ್ರಹ ಉಡಾವಣೆ ಮಾಡುವ ಮೂಲಕ ಭವಿಷ್ಯದಲ್ಲಿ ಪಾಶ್ಚಿಮಾತ್ಯ ದೇಶಗಳಿಗೆ ಸೆಡ್ಡು ಹೊಡೆಯಲು ಸಜ್ಜಾಗಿದೆ. ಆದರೆ ಇದೇ ವಿಚಾರ ಈಗ ಚರ್ಚೆಗೆ ಕೂಡ ಗ್ರಾಸವಾಗಿದೆ, ಏಕೆಂದರೆ ಈಗ ಚೀನಾ ಒಂದಲ್ಲ ಎರಡಲ್ಲ ಬರೋಬ್ಬರಿ 2,00,000 ಉಪಗ್ರಹಗಳ ಉಡಾವಣೆಗೆ ಅವಕಾಶ ಕೇಳುತ್ತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ವರದಿ ಹೇಳಿದೆ. ಈಗಾಗಲೇ ಉಪಗ್ರಹಗಳ ಸಂಖ್ಯೆ ಹೆಚ್ಚಾಗಿರುವ ಕಾರಣಕ್ಕೆ ಭೂಮಿಯ ಕಕ್ಷೆಯಲ್ಲಿ ನಾನಾ ಸಮಸ್ಯೆಗಳು ಎದುರಾಗಿವೆ. ಹೀಗಿರುವಾಗ ಚೀನಾ ನಿರ್ಧಾರ ಮತ್ತೆ ಬಾಹ್ಯಾಕಾಶ ಉದ್ಯಮದ ನಿದ್ದೆಗೆಡಿಸಿದೆ. ಚೀನಾ ಅಧಿಕಾರಿಗಳು ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟಕ್ಕೆ (ITU) ಮಹತ್ವದ ಮನವಿಯನ್ನು ಸಲ್ಲಿಸಿದ್ದಾರೆ, ಈ ಮನವಿಯಲ್ಲಿ ಭರ್ಜರಿ 2,00,000 ಉಪಗ್ರಹಗಳ ಉಡಾವಣೆಗೆ ಅವಕಾಶ ಕೋರಿದ್ದಾರೆ. ಏಷ್ಯಾದ ದೊಡ್ಡ ಆರ್ಥಿಕತೆ ಆಗಿರುವ ಚೀನಾ ದೇಶವು ಬಾಹ್ಯಾಕಾಶ ಲೋಕದಲ್ಲೂ ತನ್ನ ಸಾಮರ್ಥ್ಯ ತೋರಿಸಿಕೊಳ್ಳಲು ಈ ವೇದಿಕೆ ಸಿದ್ಧಪಡಿಸಿಕೊಂಡಿದೆ. ಆದರೆ ಚೀನಾ ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟಕ್ಕೆ ಸಲ್ಲಿಸಿರುವ ಈ ಮನವಿ ಹಾಗೇ ಉಳಿದಿದ್ದು, ಇದಕ್ಕೆ ಒಪ್ಪಿಗೆ ಸಿಕ್ಕಿಲ್ಲ. 2025ರ ಡಿಸೆಂಬರ್ ತಿಂಗಳಲ್ಲೇ ಚೀನಾ ಅಧಿಕಾರಿಗಳು ಈ ಮನವಿ ಸಲ್ಲಿಸಿದ್ದು, ಬೃಹತ್ ಭೂಸ್ಥಿರವಲ್ಲದ ಉಪಗ್ರಹ ಜಾಲ ರಚಿಸಲು ಚೀನಾ ಮುಂದಾಗಿದೆ.
2,00,000 ಉಪಗ್ರಹಗಳ ಉಡಾವಣೆಗೆ ಅವಕಾಶ ಕೇಳಿರುವ ಚೀನಾ ಅದನ್ನು ತಕ್ಷಣಕ್ಕೆ ಜಾರಿಗೊಳಿಸಲು ಅಸಾಧ್ಯ. ಆದರೂ ಬಾಹ್ಯಾಕಾಶದಲ್ಲಿ ತನ್ನ ಭವಿಷ್ಯದ ಉಪಗ್ರಹಗಳಿಗೆ ಜಾಗ ಕಾಯ್ದಿರಿಸಲು ಚೀನಾ ಈ ರೀತಿ ನಿರ್ಧಾರ ಕೈಗೊಂಡಿದೆ ಎಂಬುದು ತಜ್ಞರ ವಾದ. ಪ್ರಸ್ತುತ ಬಾಹ್ಯಾಕಾಶದಲ್ಲಿ 14,300 ಉಪಗ್ರಹಗಳು ಇದ್ದು, ಚೀನಾ ಇದಕ್ಕಿಂತ ಸುಮಾರು 14 ಪಟ್ಟು ಹೆಚ್ಚು ಉಪಗ್ರಹಗಳ ಉಡಾವಣೆಗೆ ಅವಕಾಶ ಕೊಡಿ ಎಂದು ಮನವಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟಕ್ಕೂ ಇದು ಹೊಸ ತಲೆನೋವು ತರಿಸಿದೆ. ಚೀನಾ ಇತ್ತೀಚೆಗೆ ಸ್ಥಾಪಿಸಿದ್ದ ಇನ್‌ಸ್ಟಿಟ್ಯೂಟ್ ಆಫ್ ರೇಡಿಯೋ ಸ್ಪೆಕ್ಟ್ರಮ್ ಯುಟಿಲೈಸೇಶನ್ & ಟೆಕ್ನಾಲಜಿಕಲ್ ಇನ್ನೋವೇಶನ್ ಮೂಲಕ ಮನವಿ ಸಲ್ಲಿಸಿದೆ. 2025ರಲ್ಲಿ ಚೀನಾ 92 ರಾಕೆಟ್ ಉಡಾಯಿಸಿತ್ತು ಹಾಗೂ ಈ ವರ್ಷ ಶತಕದ ಗಡಿ ದಾಟುವ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಹೀಗಿದ್ದಾಗ ಬರೋಬ್ಬರಿ 200,000 ಉಪಗ್ರಹಗಳ ಉಡಾವಣೆಗೆ ಅವಕಾಶ ಕೇಳಿರುವುದು ಸಹಜವಾಗಿ ಚರ್ಚೆಗೆ ವೇದಿಕೆ ಒದಗಿಸಿದೆ. ರುವಾಂಡಾ 2021 ರಲ್ಲಿ ಇದೇ ರೀತಿ ಮನವಿ ಮಾಡಿತ್ತು, ಆ ಸಮಯದಲ್ಲಿ 3,27,000 ಉಪಗ್ರಹಗಳಿಗೆ ಜಾಗ ಕೇಳಿತ್ತು, ಆದರೆ ಇದು ವಾಸ್ತವದಲ್ಲಿ ಸಾಧ್ಯವೇ ಇಲ್ಲ ಎಂಬುದು ತಜ್ಞರ ವಾದವಾಗಿತ್ತು. ರುವಾಂಡಾ ರೀತಿಯಲ್ಲೇ ಈಗ ಚೀನಾ 2,00,000 ಉಪಗ್ರಹಗಳಿಗೆ ಅವಕಾಶ ಕೇಳಿ ಗಮನ ಸೆಳೆದಿದೆ, ಆದರೆ ಚೀನಾ ಕೂಡ ಈ ಗುರಿ ತಲುಪಲು ಸಾಧ್ಯವಿಲ್ಲ. ಹೀಗಿದ್ದರೂ, ಚೀನಾ ತಾನು ಭವಿಷ್ಯದಲ್ಲಿ ಕೈಗೊಳ್ಳುವ ಬಾಹ್ಯಾಕಾಶ ಯೋಜನೆಗಳಿಗೆ ಈ ರೀತಿ ಮನವಿ ಮಾಡಿರಬಹುದು ಎನ್ನುತ್ತಿದ್ದಾರೆ ತಜ್ಞರು. ಹೀಗೆ ಚೀನಾ ಮಾಡಿರುವ ಮನವಿ ಬಾಹ್ಯಾಕಾಶ ಲೋಕದಲ್ಲಿ ಚರ್ಚೆಗೆ ಗ್ರಾಸವಾಗುವ ಜೊತೆಯಲ್ಲೇ, ಸ್ಪೇಸ್ ಎಕ್ಸ್ ರೀತಿ ಖಾಸಗಿ ಸಂಸ್ಥೆಗಳಿಗೆ ಭವಿಷ್ಯದಲ್ಲಿ ಪೈಪೋಟಿ ಎದುರಾಗುವ ಮುನ್ಸೂಚನೆ ನೀಡುತ್ತಿದೆ.