ಗ್ರೀನ್‌ಲ್ಯಾಂಡ್ : ಗ್ರೀನ್‌ಲ್ಯಾಂಡ್ ಅನ್ನು ಖರೀದಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಹಠ ಮತ್ತು ಬೆದರಿಕೆಗಳ ನಡುವೆಯೇ, ಯುರೋಪ್‌ನ ಪ್ರಮುಖ ರಾಷ್ಟ್ರಗಳು ಈ ದ್ವೀಪ ಪ್ರದೇಶಕ್ಕೆ ತಮ್ಮ ಸೈನಿಕರನ್ನು ಕಳುಹಿಸುವ ಮೂಲಕ ಅಮೆರಿಕಕ್ಕೆ ಖಡಕ್ ಸಂದೇಶ ರವಾನಿಸಿವೆ. ವರದಿಗಳ ಪ್ರಕಾರ, ಫ್ರಾನ್ಸ್ 15, ಸ್ವೀಡನ್ 3 ಮತ್ತು ಬ್ರಿಟನ್ 1 ಸೇನಾ ಅಧಿಕಾರಿಯನ್ನು ಗ್ರೀನ್‌ಲ್ಯಾಂಡ್‌ನ ರಕ್ಷಣಾ ತರಬೇತಿಗಾಗಿ ನಿಯೋಜಿಸಿವೆ. ಇದು ಕೇವಲ ಸಾಂಕೇತಿಕ ನಿಯೋಜನೆಯಾಗಿದ್ದರೂ, ಯುರೋಪಿಯನ್ ಯೂನಿಯನ್ (EU) ಮತ್ತು ನ್ಯಾಟೋ (NATO) ಮಿತ್ರರಾಷ್ಟ್ರಗಳು ಗ್ರೀನ್‌ಲ್ಯಾಂಡ್‌ನ ಸಾರ್ವಭೌಮತ್ವವನ್ನು ರಕ್ಷಿಸಲು ಬದ್ಧವಾಗಿವೆ ಎಂಬುದನ್ನು ಜಗತ್ತಿಗೆ ಸಾರಿದೆ.
ಈ ಸೇನಾ ನಿಯೋಜನೆಯಿಂದ ಕೆರಳಿದ ಅಧ್ಯಕ್ಷ ಟ್ರಂಪ್, ತಮ್ಮ ಟ್ರೂತ್ ಸೋಶಿಯಲ್ನಲ್ಲಿ ಯುರೋಪ್ ರಾಷ್ಟ್ರಗಳ ವಿರುದ್ಧ ಗುಡುಗಿದ್ದಾರೆ. ಗ್ರೀನ್‌ಲ್ಯಾಂಡ್‌ಗೆ ಸೈನಿಕರನ್ನು ಕಳುಹಿಸಿರುವುದು ಜಾಗತಿಕ ಸುರಕ್ಷತೆಗೆ ಅಪಾಯಕಾರಿ ಎಂದು ಕರೆದಿದ್ದಾರೆ. ಡೆನ್ಮಾರ್ಕ್, ನಾರ್ವೆ, ಸ್ವೀಡನ್, ಫ್ರಾನ್ಸ್, ಜರ್ಮನಿ, ಬ್ರಿಟನ್, ನೆದರ್ಲ್ಯಾಂಡ್ಸ್ ಮತ್ತು ಫಿನ್ಲ್ಯಾಂಡ್ ರಾಷ್ಟ್ರಗಳು ಅಪರಿಚಿತ ಉದ್ದೇಶಗಳಿಗಾಗಿ ಗ್ರೀನ್‌ಲ್ಯಾಂಡ್‌ಗೆ ಪ್ರಯಾಣ ಬೆಳೆಸಿವೆ. ಫೆಬ್ರವರಿ 1 ರಿಂದ ಈ ಎಲ್ಲಾ ದೇಶಗಳ ಉತ್ಪನ್ನಗಳ ಮೇಲೆ ಶೇ. 10 ರಷ್ಟು ಸುಂಕ ವಿಧಿಸಲಾಗುವುದು ಎಂದು ಟ್ರಂಪ್ ಘೋಷಿಸಿದ್ದಾರೆ.
ಅಷ್ಟೇ ಅಲ್ಲದೆ, ಜೂನ್ 1 ರ ವೇಳೆಗೆ ಗ್ರೀನ್‌ಲ್ಯಾಂಡ್ ಮಾರಾಟದ ಒಪ್ಪಂದವಾಗದಿದ್ದರೆ ಈ ಸುಂಕವನ್ನು ಶೇ. 25 ಕ್ಕೆ ಏರಿಸುವುದಾಗಿ ಟ್ರಂಪ್ ಎಚ್ಚರಿಸಿದ್ದಾರೆ. ಯುರೋಪ್ ರಾಷ್ಟ್ರಗಳು ಈ ಪ್ರದೇಶದಲ್ಲಿ ಆಪರೇಷನ್ ಆರ್ಕ್ಟಿಕ್ ಎಂಡ್ಯೂರೆನ್ಸ್ ಎಂಬ ಹೆಸರಿನಲ್ಲಿ ರಕ್ಷಣಾ ತಾಲೀಮು ನಡೆಸುತ್ತಿವೆ. ಫ್ರಾನ್ಸ್ 15 ಪರ್ವತಾರೋಹಿ ತಜ್ಞ ಸೈನಿಕರನ್ನು ಕಳುಹಿಸಿದ್ದು, ಶೀಘ್ರದಲ್ಲೇ ವಾಯು ಮತ್ತು ನೌಕಾಪಡೆಗಳನ್ನು ಸೇರಿಸುವುದಾಗಿ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹೇಳಿದ್ದಾರೆ. ಅಲ್ಲದೆ, ಸ್ವೀಡನ್: 3 ಸೇನಾ ಅಧಿಕಾರಿಗಳನ್ನು ನಿಯೋಜಿಸಿದೆ. ಬ್ರಿಟನ್ ಕೂಡ ಡೆನ್ಮಾರ್ಕ್‌ನ ಕೋರಿಕೆಯ ಮೇರೆಗೆ 1 ಹಿರಿಯ ಸೇನಾ ಅಧಿಕಾರಿಯನ್ನು ಕಳುಹಿಸಿದೆ. ಅಲ್ಲದೆ, ಜರ್ಮನಿಯು 13 ಸದಸ್ಯರ ತನಿಖಾ ತಂಡವನ್ನು ರವಾನಿಸಿದೆ.