ಮಾಸ್ಕೋ: ಇರಾನ್ ವಿರುದ್ಧ ಮಿಲಿಟರಿ ದಾಳಿಗಳನ್ನು ನಡೆಸುವ ಅಮೆರಿಕದ ಇತ್ತೀಚಿನ ಬೆದರಿಕೆಗಳನ್ನು ರಷ್ಯಾದ ವಿದೇಶಾಂಗ ಸಚಿವಾಲಯ ತೀವ್ರವಾಗಿ ಖಂಡಿಸಿದೆ. ಅಲ್ಲದೆ, ಈ ನೆಡೆಯು ಖಂಡಿತವಾಗಿ ಸ್ವೀಕಾರಾರ್ಹವಲ್ಲ ಮತ್ತು ಜಾಗತಿಕ ಸ್ಥಿರತೆಗೆ ನೇರ ಬೆದರಿಕೆ ಎಂದು ಕರೆದಿದೆ. ಅಧಿಕೃತ ಹೇಳಿಕೆಯಲ್ಲಿ, ಸಚಿವಾಲಯದ ವಕ್ತಾರೆ ಮಾರಿಯಾ ಜಖರೋವಾ, ಯಾವುದೇ ಯುಎಸ್ ಮಿಲಿಟರಿ ಹಸ್ತಕ್ಷೇಪವು ಮಧ್ಯಪ್ರಾಚ್ಯ ಮತ್ತು ಅಂತಾರಾಷ್ಟ್ರೀಯ ಭದ್ರತೆ ಎರಡಕ್ಕೂ ವಿನಾಶಕಾರಿ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಎಚ್ಚರಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನಿನ ಪ್ರತಿಭಟನಾಕಾರರನ್ನು ತಮ್ಮ ದಂಗೆಯನ್ನು ಮುಂದುವರಿಸಲು ಒತ್ತಾಯಿಸಿದ ನಂತರ ಮಾಸ್ಕೋದ ಪ್ರತಿಕ್ರಿಯೆ ಬಂದಿದೆ. ಅದರೆ, ರಷ್ಯಾ ಅಶಾಂತಿಯನ್ನು ದೇಶೀಯ ಚಳುವಳಿಯಾಗಿ ಅಲ್ಲ, ಬದಲಾಗಿ ವಿಧ್ವಂಸಕ ಹಸ್ತಕ್ಷೇಪವನ್ನು ಎತ್ತಿ ತೋರಿಸಿದೆ.
ಇರಾನ್‌ಗೆ ಪ್ರತಿಕೂಲವಾಗಿರುವ ವಿದೇಶಿ ಪಡೆಗಳು ಇರಾನ್ ದೇಶವನ್ನು ಅಸ್ಥಿರಗೊಳಿಸಲು ಮತ್ತು ನಾಶಮಾಡಲು ಹೆಚ್ಚುತ್ತಿರುವ ಸಾಮಾಜಿಕ ಉದ್ವಿಗ್ನತೆಯನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ಜಖರೋವಾ ಕಿಡಿಕಾರಿದ್ದಾರೆ. ಅಲ್ಲದೆ, ಪಾಶ್ಚಿಮಾತ್ಯ ಶಕ್ತಿಗಳು ಕ್ರಾಂತಿಯ ಬಣ್ಣದ ತಂತ್ರಗಳನ್ನು ನಿಯೋಜಿಸುತ್ತಿವೆ ಎಂದು ಜಖರೋವಾ ಆರೋಪಿಸಿದ್ದಾರೆ. ಅಲ್ಲದೆ, ಆರಂಭದಲ್ಲಿ ಶಾಂತಿಯುತ ಪ್ರದರ್ಶನಗಳನ್ನು ಆಡಳಿತ ಬದಲಾವಣೆಗೆ ನೆಪವಾಗಿ ಬಳಸಿಕೊಂಡರು ಎಂದು ಅಮೆರಿಕದ ವಿರುದ್ಧ ಕಿಡಿಕಾರಿದೆ.
ರಷ್ಯಾವು ಪಶ್ಚಿಮದ ಆರ್ಥಿಕ ನೀತಿಗ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಅಲ್ಲದೆ, ಹಲವು ವರ್ಷಗಳ ಕಾನೂನುಬಾಹಿರ ನಿರ್ಬಂಧಗಳು ಇರಾನ್‌ನ ಪ್ರಸ್ತುತ ಸಾಮಾಜಿಕ-ಆರ್ಥಿಕ ಬಿಕ್ಕಟ್ಟಿಗೆ ಪ್ರಾಥಮಿಕ ಕಾರಣ ಎಂದು ಪ್ರತಿಪಾದಿಸಿದೆ. ಸಾರ್ವಜನಿಕರ ಕೋಪವನ್ನು ಕೆರಳಿಸಲು ಈ ಕ್ರಮಗಳು ಉದ್ದೇಶಪೂರ್ವಕವಾಗಿ ಇರಾನ್ ಆರ್ಥಿಕತೆಯನ್ನು ದುರ್ಬಲಗೊಳಿಸಿವೆ ಎಂದು ಮಾಸ್ಕೋ ಆರೋಪಿಸಿದೆ.
ಹೆಚ್ಚುವರಿಯಾಗಿ, ಇರಾನ್ನೊಂದಿಗೆ ವ್ಯವಹಾರ ನಡೆಸುವ ಯಾವುದೇ ದೇಶಕ್ಕೆ ಶೇ.25 ಸುಂಕ ವಿಧಿಸುವ ಅಧ್ಯಕ್ಷ ಟ್ರಂಪ್‌ರ ಇತ್ತೀಚಿನ ಘೋಷಣೆಯನ್ನು ರಷ್ಯಾ ದೃಢವಾಗಿ ತಿರಸ್ಕರಿಸಿದೆ. ಈ ಕ್ರಮವನ್ನು ಇರಾನ್‌ನ ಅಂತಾರಾಷ್ಟ್ರೀಯ ಪಾಲುದಾರರನ್ನು ಬ್ಲ್ಯಾಕ್‌ಮೇಲ್ ಮಾಡುವ ಲಜ್ಜೆಗೆಟ್ಟ ಪ್ರಯತ್ನವಾಗಿದೆ. ಇಸ್ಲಾಮಿಕ್ ಗಣರಾಜ್ಯದೊಂದಿಗೆ ತನ್ನ ಸಮಗ್ರ ವ್ಯಾಪಾರ ಕಾರ್ಯತಂತ್ರದ ಪಾಲುದಾರಿಕೆಯನ್ನು ಕಾಪಾಡಿಕೊಳ್ಳಲು ರಷ್ಯಾ ಪ್ರತಿಜ್ಞೆ ಮಾಡಿದೆ. 2025ರ ಜೂನ್ನಲ್ಲಿ ನಡೆದ ಸಂಕ್ಷಿಪ್ತ ಮಿಲಿಟರಿ ಉಲ್ಬಣಗಳನ್ನು ಉಲ್ಲೇಖಿಸುತ್ತಾ, ವಿದೇಶಾಂಗ ಸಚಿವಾಲಯವು ದೇಶೀಯ ಅಶಾಂತಿಯನ್ನು ಆಕ್ರಮಣವನ್ನು ಪುನರಾವರ್ತಿಸಲು ನೆಪವಾಗಿ ಬಳಸುವುದು ವಿನಾಶಕಾರಿ ಎಂದು ರಷ್ಯಾ ಎಚ್ಚರಿಸಿದೆ.
ಇರಾನ್‌ನಲ್ಲಿ ನಡೆದ ದಮನ ಕಾರ್ಯಾಚರಣೆಯಲ್ಲಿ 2,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಗುಂಪುಗಳು ವರದಿ ಮಾಡಿದ್ದರೂ, ಇರಾನ್ ಸರ್ಕಾರವು ರಚನಾತ್ಮಕ ಸಂವಾದವನ್ನು ಬಯಸುತ್ತಿದೆ. ಪಶ್ಚಿಮವು ಬೆಂಕಿಗೆ ತುಪ್ಪ ಹಾಕುತ್ತಿದೆ ಎಂಬ ತನ್ನ ನಿಲುವಿನಲ್ಲಿ ಮಾಸ್ಕೋ ದೃಢವಾಗಿದೆ.