ದುಬೈ: ಆಡಳಿತ ವಿರೋಧಿ ಪ್ರತಿಭಟನೆಯನ್ನು ಹತ್ತಿಕ್ಕಿ, ಪ್ರತಿಭಟನಕಾರರ ಸಾವಿಗೆ ಕಾರಣವಾಗುತ್ತಿರುವ ಇರಾನ್ ವಿರುದ್ಧ ದಾಳಿ ಮಾಡುವ ಬೆದರಿಕೆ ಹಾಕಿದ ಬೆನ್ನಲ್ಲೇ ಇರಾನ್ ಸಂಧಾನಕ್ಕೆ ಸಿದ್ಧವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 'ಇರಾನ್ ಕರೆ ಮಾಡಿ, ಮಾತುಕತೆ ನಡೆಸಲು ಬಯಸುತ್ತಿರುವುದಾಗಿ ಅಮೇರಿಕಾ ಹೇಳಿದೆ. ಅವರ ಮನವಿ ಮೇರೆಗೆ ನಾವು ಸಹ ಮಾತುಕತೆಗೆ ಮುಂದಾಗಿದ್ದೇವೆ' ಎಂದು ಅವರು ತಿಳಿಸಿದ್ದಾರೆ. 'ಆದರೆ, ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಕಾರರು ಸಾವಿಗೀಡಾಗುತ್ತಿದ್ದಾರೆ. ಅಲ್ಲಿನ ಸರ್ಕಾರವು ಪ್ರತಿಭಟನಕಾರರನ್ನು ಬಂಧಿಸುತ್ತಿದೆ. ಈ ಸಮಸ್ಯೆಗಳು ಮೊದಲು ಬಗೆಹರಿಯಬೇಕು. ಈ ನಿಟ್ಟಿನಲ್ಲಿ ಮೊದಲು ಕೆಲಸ ಮಾಡಬೇಕು' ಎಂದು ಅವರು ಸುದ್ದಿಗಾರರಿಗೆ ಹೇಳಿದ್ದಾರೆ. ಆದರೆ, ಟ್ರಂಪ್ ಅವರ ಹೇಳಿಕೆಗಳನ್ನು ಇರಾನ್ ತಕ್ಷಣಕ್ಕೆ ಒಪ್ಪಿಕೊಂಡಿಲ್ಲ. 'ಇರಾನ್‌ನ ಜನರು ಸ್ವಾತಂತ್ರ್ಯಕ್ಕಾಗಿ ಹಿಂದೆಂದೂ ಕೇಳರಿಯದ ರೀತಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಅವರಿಗೆ ಎಲ್ಲ ರೀತಿಯಲ್ಲಿ ಸಹಾಯ ಮಾಡಲು ಅಮೆರಿಕ ಸಿದ್ಧವಿದೆ' ಎಂದು ಟ್ರಂಪ್ ಹೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಇರಾನ್, 'ಅಮೆರಿಕ ದಾಳಿ ನಡೆಸಿದರೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುವುದಾಗಿ' ಗುಡುಗಿತ್ತು.