ವಾಷಿಂಗ್ಟನ್: ಸೇನಾ ಕಾರ್ಯಾಚರಣೆ ನಡೆಸಿ, ವೆನಿಜುವೆಲಾವನ್ನು ಅನಧಿಕೃತವಾಗಿ ವಶಪಡಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಣ್ಣು ಈಗ ಗ್ರೀನ್‌ಲ್ಯಾಂಡ್, ಇರಾನ್ ಮತ್ತು ಕ್ಯೂಬಾ ಮೇಲೆ ಬಿದ್ದಿದೆ ಎನ್ನಲಾಗುತ್ತದೆ. ಟ್ರಂಪ್ ನ ಇತ್ತೀಚಿನ ನಡೆಗಳು ಈ ಮೂರೂ ದೇಶಗಳ ಮೇಲೆ ದಾಳಿಗೆ ಸಿದ್ಧತೆ ನಡೆಸುತ್ತಿದ್ದಾರೆಯೇ ಎಂಬ ಪ್ರಶ್ನೆಯನ್ನು ಮೂಡಿಸಿದೆ. ಇರಾನ್ ಆಡಳಿತದ ವಿರುದ್ಧ ತಿರುಗಿಬಿದ್ದಿರುವ ಇರಾನಿಯನ್ನರಿಗೆ ಬೆಂಬಲ ಘೋಷಿಸಿರುವುದು, ಗ್ರೀನ್‌ಲ್ಯಾಂಡ್ ಖರೀದಿಸುವೆ ಇಲ್ಲವಾದಲ್ಲಿ ಬಲಪ್ರಯೋಗದ ಮೂಲಕವಾದರೂ ವಶಪಡಿಸಿಕೊಳ್ಳುವೆ ಎಂಬರ್ಥದ ಹೇಳಿಕೆಗಳನ್ನು ನೀಡುವುದು, ವೆನಿಜುವೆಲಾ ಸಂಘ ತೊರೆಯಲು ಕ್ಯೂಬಾಗೆ ಒತ್ತಾಯಿಸುತ್ತಿರುವುದು; ಈ ಎಲ್ಲಾ ನಡೆಗಳ ಮೂಲಕ ಟ್ರಂಪ್ ಈ 3 ಪ್ರದೇಶಗಳನ್ನು ಅಮೆರಿಕದ ತೆಕ್ಕೆಗೆ ಸಿಕ್ಕಿಸಲು ಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಇರಾನ್‌ನ ನಾಗರಿಕ ದಂಗೆಯ ಹಿಂದೆ ಅಮೆರಿಕದ ಕೈವಾಡವಿದೆ ಎಂದು ಈ ಹಿಂದೆ ಶಂಕೆಯಿತ್ತು. ಆದರೆ ಟ್ರಂಪ್ ತಮ್ಮ ಇತ್ತೀಚಿನ ನಡೆ ನುಡಿಗಳ ಮೂಲಕ ಅಮೆರಿಕದ ಹಸ್ತಕ್ಷೇಪವನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ ಎನ್ನಲಾಗುತ್ತಿದೆ. 'ಇರಾನ್ ಸ್ವಾತಂತ್ರ್ಯ ಪಡೆಯಲು ಹತ್ತಿರವಾಗುತ್ತಿದೆ. ಸಹಾಯ ಮಾಡಲು ಅಮೆರಿಕ ಸಿದ್ಧವಾಗಿದೆ' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ. ಪ್ರತಿಭಟನೆಗಳನ್ನು ಹತ್ತಿಕ್ಕಲು ಇರಾನ್ ಸರ್ಕಾರ ಮುಂದಾದಲ್ಲಿ ಅಮೆರಿಕ ಮಧ್ಯಪ್ರವೇಶ ಖಚಿತ ಎಂದಿದ್ದಾರೆ. ಇನ್ನು ಮೂಲಗಳ ಪ್ರಕಾರ, ರಾಜಧಾನಿ ಟೆಹ್ರಾನ್‌ನ ಸೇನೇತರ ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಬಗ್ಗೆ ನೀಲನಕ್ಷೆ ತಯಾರಾಗಿದೆ ಎನ್ನಲಾಗಿದೆ. ಇದರ ನಡುವೆಯೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜತೆ ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರೂಬಿಯೋ ದೂರವಾಣಿ ಮೂಲಕ ಚರ್ಚಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಕಳೆದ ಜೂನ್‌ನಲ್ಲಿ ಇರಾನ್‌ನ ಪರಮಾಣು ನೆಲೆಗಳನ್ನು ಗುರಿಯಾಗಿಸಿ ನಡೆಸಿದ್ದ ದಾಳಿಯನ್ನು ಅಮೆರಿಕ ಪುನರಾವರ್ತಿಸಲಿದೆಯೇ ಎಂಬ ಆತಂಕ ಮೂಡಿದೆ.
ಡೆನ್ಮಾರ್ಕ್‌ನ ಸ್ವಾಯತ್ತ ಪ್ರದೇಶವಾದ ಗ್ರೀನ್‌ಲ್ಯಾಂಡ್ ವಶಪಡಿಸಿಕೊಳ್ಳಲು ಯಾವ ರೀತಿ ದಾಳಿ ಮಾಡಬಹುದು ಎಂದು ಯೋಜನೆ ರೂಪಿಸಲು ಅಮೆರಿಕ ಸೇನೆಯ ವಿಶೇಷ ಕಾರ್ಯಪಡೆಯ ಹಿರಿಯ ಕಮಾಂಡೋಗಳಿಗೆ ಟ್ರಂಪ್ ಆದೇಶಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಆದರೆ ಸೇನೆಯ ಹಿರಿಯ ಅಧಿಕಾರಿಗಳನ್ನು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಇದರಿಂದ ಎದುರಾಗುವ ಕಾನೂನು ಸಮಸ್ಯೆ ಹಾಗೂ ರಾಜಕೀಯ ಸಮಸ್ಯೆ ಬಗ್ಗೆ ಎಚ್ಚರಿಸಿದ್ದಾರೆ ಎನ್ನಲಾಗಿದೆ. ಟ್ರಂಪ್ ಅವರ ಗಮನವನ್ನು ಬೇರೆಡೆ ತಿರುಗಿಸಲು ಸೇನಾಧಿಕಾರಿಗಳು ಪ್ರಯತ್ನಿಸುತ್ತಿದ್ದು, ರಷ್ಯಾ ಹಡಗುಗಳನ್ನು ತಡೆಯುವುದು, ಇರಾನ್ ಮೇಲೆ ದಾಳಿ ಮಾಡುವುದು ಹೀಗೆ ಹಲವು ಸಲಹೆಗಳನ್ನು ನೀಡುತ್ತಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ವೆನಿಜುವೆಲಾದಿಂದ ಬರುತ್ತಿದ್ದ ತೈಲ ಮತ್ತು ಹಣದ ಮೇಲೆ ಕ್ಯೂಬಾ ಬದುಕುತ್ತಿತ್ತು. ಇದಕ್ಕೆ ಪ್ರತಿಯಾಗಿ ವೆನನಿಜುವೆಲಾದ ಸರ್ವಾಧಿಕಾರಿಗಳಿಗೆ ಭದ್ರತಾ ಸೇವೆಯನ್ನು ಒದಗಿಸುತ್ತಿತ್ತು ಎಂದು ಟ್ರಂಪ್ ಆರೋಪಿಸಿದ್ದಾರೆ. ವೆನಿಜುವೆಲಾ ಮೇಲಿನ ಇತ್ತೀಚಿನ ದಾಳಿಯಲ್ಲಿ ಹೆಚ್ಚಿನ ಕ್ಯೂಬನ್ನರು ಮೃತಪಟ್ಟಿದ್ದಾರೆ ಎಂದಿರುವ ಟ್ರಂಪ್, ವೆನಿಜುವೆಲಾ ಜತೆಗಿನ ಒಪ್ಪಂದಗಳನ್ನು ಮುರಿದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಅಲ್ಲದೆ ಈ ಬಗ್ಗೆ ಮಾಡಿದ್ದ ಸಾಮಾಜಿಕ ಜಾಲತಾಣ ಪೋಸ್ಟ್‌ಗೆ, 'ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರುಬಿಯೋ ಅವರನ್ನು ಕ್ಯೂಬಾದ ಅಧ್ಯಕ್ಷರನ್ನಾಗಿ ಮಾಡಿ' ಎಂಬ ಬಳಕೆದಾರರೊಬ್ಬರ ಸಲಹೆಗೆ ಟ್ರಂಪ್, 'ನನಗೂ ಇದು ಸರಿಯೆಂದು ಅನಿಸುತ್ತದೆ' ಎನ್ನುವ ಮೂಲಕ ಕ್ಯೂಬಾ ಮೇಲೂ ದಾಳಿ ನಡೆಸುವ ಆಸಕ್ತಿಯನ್ನು ಬಹಿರಂಗಪಡಿಸಿದಂತಾಗಿದೆ.