ಇಸ್ಲಾಮಾಬಾದ್: ಪಾಕಿಸ್ತಾನಿ ಸೇನೆಯೊಂದಿಗೆ ಭಯೋತ್ಪಾದಕಾ ಸಂಘಟನೆ ಹೊಂದಿರುವ ನಂಟನ್ನು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯ ಲಷ್ಕರ್-ಎ-ತೈಬಾದ ಎರಡನೇ ಪ್ರಮುಖ ನಾಯಕ ಸೈಫುಲ್ಲಾ ಕಸೂರಿ ಒಪ್ಪಿಕೊಂಡಿದ್ದಾನೆ. ಪಾಕಿಸ್ತಾನದ ಒಂದು ಮಕ್ಕಳ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಕಸೂರಿ ಈ ವಿಚಾರವನ್ನು ದೃಢಪಡಿಸಿದ್ದಾನೆ. ಅವನು ಯಾವಾಗ ಭಾಷಣ ಮಾಡಿರುವುದು ಎಂಬುದು ತಿಳಿದುಬಂದಿಲ್ಲ. ಆದರೆ ಆ ವಿಡಿಯೊ ನಿಜವಾದದ್ದು ಎಂಬುದನ್ನು ಗುಪ್ತಚರ ಮೂಲಗಳು ದೃಢಪಡಿಸಿವೆ. ಈ ಕಾರ್ಯಕ್ರಮವು ಪಾಕಿಸ್ತಾನದಲ್ಲಿ ನಡೆದಿತ್ತು. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನು ಹತ್ಯೆ ಮಾಡಿದ ಭಯೋತ್ಪಾದಕ ಗುಂಪಿನ ಉಪ ಮುಖ್ಯಸ್ಥನು ವಿಡಿಯೊದಲ್ಲಿ, ಕೆಂಪು ಬಲೂನ್‌ಗಳಿಂದ ಅಲಂಕರಿಸಲ್ಪಟ್ಟ ಎತ್ತರದ ವೇದಿಕೆಯ ಮೇಲೆ ನಿಂತಿರುವುದು ಕಂಡುಬಂದಿದೆ. ಚೌಕಟ್ಟಿನಲ್ಲಿ ಶಾಲೆಯ ಲೋಗೋದ ಅರ್ಧದಷ್ಟು ಭಾಗ ತೋರಿಸಲಾಗಿದೆ. ಪಾಕಿಸ್ತಾನದ ಸೇನೆಯು ಅಂತ್ಯಕ್ರಿಯೆಯ ಪ್ರಾರ್ಥನೆಯನ್ನು ಮುನ್ನಡೆಸಲು ನನ್ನನ್ನು ಆಹ್ವಾನಿಸುತ್ತದೆ. ನಿಮಗೆ ಗೊತ್ತೇ? ಭಾರತ ಕೂಡ ನನ್ನನ್ನು ನೋಡಿ ಹೆದರುತ್ತದೆ ಎಂದು ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದಕ ಹೇಳಿದ್ದಾನೆ.