ನವದೆಹಲಿ : ಸ್ವತಂತ್ರ ರಾಷ್ಟ್ರವಾಗಿದ್ದರೂ ಡೆನ್ಮಾರ್ಕ್ ರಾಜಪ್ರಭುತ್ವದ ಅಡಿಯಲ್ಲಿರುವ ವಿಶ್ವದ ಅತಿದೊಡ್ಡ ದ್ವೀಪ ಗ್ರೀನ್‌ಲ್ಯಾಂಡ್‌ಅನ್ನು ಆಕ್ರಮಿಸಲು ಟ್ರಂಪ್ ಆರ್ಮಿ ಚೀಫ್‌ಗಳಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಯಾವ ರೀತಿಯಲ್ಲಿ ಗ್ರೀನ್‌ಲ್ಯಾಂಡ್ ಮೇಲೆ ದಾಳಿ ಮಾಡಬಹುದು ಎನ್ನುವ ಪ್ಲ್ಯಾನ್‌ಅನ್ನು ಸಿದ್ದಪಡಿಸುವಂತೆ ತಿಳಿಸಿದ್ದಾರೆ. ಆದರೆ, ಹಿರಿಯ ಮಿಲಿಟರಿ ನಾಯಕರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮುಂದಾಗಬಹುದಾದ ಕಾನೂನು ಸಮಸ್ಯೆಗಳು ಹಾಗೂ ಯುಎಸ್ ಕಾಂಗ್ರೆಸ್‌ನ ಅಡೆತಡೆಯನ್ನು ಇದಕ್ಕೆ ಕಾರಣವಾಗಿ ನೀಡಿದ್ದಾರೆ. ಗ್ರೀನ್‌ಲ್ಯಾಂಡ್ ಅತಿಕ್ರಮಿಸಲು ತುರ್ತು ಯೋಜನೆಗಳನ್ನು ಸಿದ್ದಮಾಡುವಂತೆ ಅಮೆರಿಕ ಅಧ್ಯಕ್ಷ ಸ್ಪೆಷಲ್ ಫೋರ್ಸ್‌ಗಳ ಲೀಡರ್‌ಷಿಪ್‌ಗೆ ನಿರ್ದೇಶನ ನೀಡಿದ್ದಾರೆ. ಆದರೆ, ಇದು ಅಮೆರಿಕದ ಮಿಲಿಟರಿಯಲ್ಲಿಯೇ ದೊಡ್ಡ ಮಟ್ಟದ ಪ್ರತಿರೋಧ ಹುಟ್ಟುಹಾಕಿದೆ ಎಂದೂ ತಿಳಿಸಲಾಗಿದೆ. ಡೈಲಿ ಮೇಲ್ ಉಲ್ಲೇಖಿಸಿದ ಮೂಲಗಳ ಪ್ರಕಾರ, ಟ್ರಂಪ್ ಜಂಟಿ ವಿಶೇಷ ಕಾರ್ಯಾಚರಣೆ ಕಮಾಂಡ್‌ಗೆ(ಜೆಎಸ್‌ಒಸಿ) ಯೋಜನೆಯನ್ನು ರೂಪಿಸುವಂತೆ ಸೂಚಿಸಿದ್ದಾರೆ. ಆದರೆ ಜಂಟಿ ಮುಖ್ಯಸ್ಥರು ಸೇರಿದಂತೆ ಹಿರಿಯ ಅಧಿಕಾರಿಗಳು, ಅಂತಹ ಕಾರ್ಯಾಚರಣೆ ಕಾನೂನುಬಾಹಿರ ಮತ್ತು ಕಾಂಗ್ರೆಸ್ ಅನುಮೋದನೆಯನ್ನು ಹೊಂದಿರುವುದಿಲ್ಲ ಎಂದು ವಾದಿಸಿ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.
ವೆನುಜವೇಲದ ಅಧ್ಯಕ್ಷ ನಿಕೋಲಸ್ ಮಡುರೊ ವಿರುದ್ಧದ ಅಮೆರಿಕದ ಯಶಸ್ವಿ ಕಾರ್ಯಾಚರಣೆಯ ನಂತರ, ರಾಜಕೀಯ ಸಲಹೆಗಾರ ಸ್ಟೀಫನ್ ಮಿಲ್ಲರ್ ನೇತೃತ್ವದ ಟ್ರಂಪ್ ಅವರ ಆಂತರಿಕ ವಲಯದಲ್ಲಿರುವ ಕಟ್ಟರ್ ವ್ಯಕ್ತಿಗಳು ಹೆಚ್ಚು ದೃಢನಿಶ್ಚಯವನ್ನು ಹೊಂದಿದ್ದಾರೆ ಎಂದು ವರದಿ ಹೇಳಿದೆ. ರಷ್ಯಾ ಅಥವಾ ಚೀನಾ ಆರ್ಕ್ಟಿಕ್ ಪ್ರದೇಶದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸುವ ಮೊದಲು ಗ್ರೀನ್‌ಲ್ಯಾಂಡ್ ಅನ್ನು ಸುರಕ್ಷಿತಗೊಳಿಸಲು ಅಮೆರಿಕ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಈ ಸಲಹೆಗಾರರು ತಿಳಿಸಿದ್ದಾರೆ ಎಂದು ಹೇಳಲಾಗುತ್ತದೆ. ಟ್ರಂಪ್ ಗ್ರೀನ್‌ಲ್ಯಾಂಡ್‌ನಲ್ಲಿ ತಮ್ಮ ಆಸಕ್ತಿಯನ್ನು ಸಾರ್ವಜನಿಕವಾಗಿ ಪುನರುಚ್ಚರಿಸಿದ್ದಾರೆ, ಗ್ರೀನ್‌ಲ್ಯಾಂಡ್ ಆಕ್ರಮಣ ಸುಲಭವಾಗಿ ಆಗದಿದ್ದರೆ, ಕಠಿಣ ಮಾರ್ಗವನ್ನಾದರೂ ಬಳಸಿಕೊಂಡು ಅದನ್ನು ವಶಕ್ಕೆ ಪಡೆಯುತ್ತೇವೆ ಎಂದು ಎಚ್ಚರಿಸಿದ್ದಾರೆ. ರಷ್ಯಾ ಅಥವಾ ಚೀನಾ ಅಲ್ಲಿ ಕಾರ್ಯತಂತ್ರದ ನೆಲೆಯನ್ನು ಪಡೆಯಲು ವಾಷಿಂಗ್ಟನ್ ಅನುಮತಿಸುವುದಿಲ್ಲ ಎಂದು ಒತ್ತಾಯಿಸಿದ್ದಾರೆ. ದ್ವೀಪದ ಸುತ್ತಮುತ್ತಲಿನ ನೀರಿನಲ್ಲಿ ಚೀನಾ ಮತ್ತು ರಷ್ಯಾದ ಹಡಗುಗಳು ವ್ಯಾಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಸಮಸ್ಯೆಯನ್ನು ರಾಷ್ಟ್ರೀಯ ಭದ್ರತಾ ಕಡ್ಡಾಯವೆಂದು ರೂಪಿಸಿವೆ ಎಂದು ಅವರು ಹೇಳಿಕೊಂಡಿದ್ದಾರೆ.