ವಾಷಿಂಗ್ಟನ್: ಶಾಂತ ಸಮುದ್ರದಲ್ಲಿ ಶಾಂತವಾಗಿ ಸಾಗುತ್ತಿದ್ದ ರಷ್ಯಾದ ತೈಲ ಟ್ಯಾಂಕರನ್ನು ಅಮೆರಿಕದ ನೌಕಾಪಡೆ ಜ. 7ರಂದು ತನ್ನ ವಶಕ್ಕೆ ಪಡೆದಿದೆ. ಮರಿನೆರಾ (ಹಿಂದಿನ ಹೆಸರು ಬೆಲ್ಲಾ 1) ಎಂಬ ಹೆಸರಿನ ಈ ಹಡಗು, ಇರಾನ್ ನಿಂದ ವೆನೆಜುವೆಲಾದ ಕಡೆಗೆ ಪ್ರಯಾಣ ಬೆಳೆಸಿತ್ತು. ಅಲ್ಲಿಗೆ ಹೋಗಿ ಕಚ್ಚಾ ತೈಲವನ್ನು ತುಂಬಿಕೊಂಡು ಅದು ರಷ್ಯಾದ ಜೊತೆಗೆ ತೈಲ ಒಪ್ಪಂದ ಮಾಡಿಕೊಂಡಿರುವ ರಾಷ್ಟ್ರಗಳಿಗೆ ಸರಬರಾಜು ಮಾಡುತ್ತದೆ. ಆ ಸರಬರಾಜು ವ್ಯವಹಾರದಲ್ಲಿ ವೆನೆಜುವೆಲಾದಿಂದ ಬರುವ ತೈಲ ಭಾರತದ ರಿಲಯನ್ಸ್ ಕಂಪನಿಗೆ, ನಯಾರಾ ರಿಫೈನರೀಸ್ ಗೆ, ಇಂಡಿಯನ್ ಆಯಿಲ್ ಹಾಗೂ ಭಾರತ್ ಪೆಟ್ರೋಲಿಯಂಗೆ ಬರುತ್ತದೆ. ಅಸಲಿಗೆ, ರಷ್ಯಾದಲ್ಲೇ ಅಪಾರ ಪ್ರಮಾಣದ ಕಚ್ಚಾ ತೈಲವಿದೆ. ಅದಕ್ಕೆ ವೆನೆಜುವೆಲಾದ ತೈಲ ಬೇಕಿಲ್ಲ. ಅದರ ಬಳಿ ಅಪಾರವಾದ ತೈಲವಿದೆ. ಆದರೆ, ವೆನೆಜುವೆಲಾದಿಂದ ಅದು ತನ್ನ ತೈಲ ವ್ಯವಹಾರಿಕ ದೇಶಗಳಿಗೆ ಅದು ಕಚ್ಚಾ ತೈಲ ಸರಬರಾಜು ಮಾಡುತ್ತದಷ್ಟೇ. ಅದೊಂದು ವ್ಯವಹಾರವಷ್ಟೇ. ಆದರೀಗ, ಆ ತೈಲ ಹಡಗನ್ನು ಹಿಡಿದಿರುವುದರಿಂದ ರಿಲಯನ್ಸ್ ಕಂಪನಿಗೆ ದೊಡ್ಡಮಟ್ಟದ ನಷ್ಟ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ. ಇದು ರಿಲಯನ್ಸ್ ಗೆ ನಷ್ಟ ಉಂಟು ಮಾಡಲೆಂದು ಮಾಡಲಾಗಿರುವ ಕಾರ್ಯಾಚರಣೆಯಲ್ಲ. ಆದರೂ, ಈ ಕ್ರಮದಿಂದ ರಿಲಯನ್ಸ್ , ನಯಾರಾ, ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಕಂಪನಿಗಳಿಗೆ ಸಕಾಲದಲ್ಲಿ ಬರಬೇಕಿರುವ ಕಚ್ಚಾ ತೈಲ ಪೂರೈಕೆಯಾಗದೇ ಅದರಿಂದ ಕೊಂಚ ನಷ್ಟವಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.