ಬೀಜಿಂಗ್: ಅಮೆರಿಕವು ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊರನ್ನು ಬಂಧಿಸಿದ ನಂತರ ಪ್ರತಿಕ್ರಿಯಿಸಿದ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಇದು ಏಕಪಕ್ಷೀಯ ಮತ್ತು ನೆರೆಯ ರಾಷ್ಟ್ರಗಳನ್ನು ಬೆದರಿಸುವ ಕ್ರಮ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಬೀಜಿಂಗ್‌ನಲ್ಲಿ ಮಾತನಾಡಿದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಆಪರೇಷನ್ ಅಬ್ಸೊಲ್ಯೂಟ್ ರೆಸೊಲ್ವ್ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ, ಸಾರ್ವಭೌಮತ್ವವು ಅಂತರಾಷ್ಟ್ರೀಯ ಸಂಬಂಧಗಳ ತಳಹದಿಯಾಗಿರಬೇಕು ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಕ್ಸಿ, ಇಂದು ಜಗತ್ತು ಶತಮಾನದಲ್ಲಿ ಕಂಡರಿಯದ ಬದಲಾವಣೆಗಳು ಮತ್ತು ಪ್ರಕ್ಷುಬ್ಧತೆಗೆ ಒಳಗಾಗುತ್ತಿದೆ. ಅಲ್ಲದೆ, ಏಕಪಕ್ಷೀಯ ಮತ್ತು ಬೆದರಿಸುವ ಕ್ರಮಗಳು ಅಂತರಾಷ್ಟ್ರೀಯ ಕ್ರಮವನ್ನು ತೀವ್ರವಾಗಿ ದುರ್ಬಲಗೊಳಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಡುರೊ ಬಂಧನದ ಬಗ್ಗೆ ಮಾತನಾಡಿದ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, ಬೀಜಿಂಗ್ ವಿಶ್ವ ನ್ಯಾಯಾಧೀಶ ಅಥವಾ ಪೊಲೀಸ್ ಆಗಿ ಕಾರ್ಯನಿರ್ವಹಿಸುವ ಯಾವುದೇ ದೇಶವನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಅಮೆರಿಕದ ಮಿಲಿಟರಿ ದಾಳಿ ಮತ್ತು ಮಡುರೊ ಅಪಹರಣವು ಅಂತರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಚೀನಾ ವಿದೇಶಾಂಗ ಇಲಾಖೆ ತಿಳಿಸಿದೆ.
ಸೆರೆಹಿಡಿದಿರುವ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಔಪಚಾರಿಕ ಬೇಡಿಕೆಯನ್ನು ಹೊರಡಿಸಿದ್ದು, ಅವರ ವೈಯಕ್ತಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ವಾಷಿಂಗ್ಟನ್‌ಗೆ ಚೀನಾ ಒತ್ತಾಯಿಸಿದೆ.