ಬ್ಯಾಂಕಾಕ್ : ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವಿನ ವಿವಾದಿತ ಗಡಿ ಪ್ರದೇಶದಲ್ಲಿರುವ ಭಗವಾನ್ ವಿಷ್ಣುವಿನ 30ಅಡಿ ಎತ್ತರದ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ. ಘಟನೆಗೆ ಸಂಬಂಧಿಸಿ ಭಾರತ ಆಕ್ಷೇಪ ವ್ಯಕ್ತಪಡಿಸಿದ್ದು ಇದಕ್ಕೆ ಥೈಲ್ಯಾಂಡ್ ಸರ್ಕಾರ ಅಧಿಕೃತ ಸ್ಪಷ್ಟನೆಯನ್ನೂ ನೀಡಿದೆ. ಈ ಕ್ರಮವು ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಹೊಂದಿರಲಿಲ್ಲ, ಬದಲಾಗಿ ರಾಷ್ಟ್ರೀಯ ಭದ್ರತೆ ಮತ್ತು ಗಡಿ ನಿರ್ವಹಣೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅದು ತಿಳಿಸಿದೆ. 2014ರಲ್ಲಿ ಥೈಲ್ಯಾಂಡ್ ಮತ್ತು ಕಾಂಬೋಡಿಯಾ ಗಡಿಭಾಗವಾದ 'ಚಾಂಗ್ ಆನ್ ಮಾ' ಪ್ರದೇಶದಲ್ಲಿ ಸುಮಾರು ಮೂವತ್ತು ಅಡಿ ಎತ್ತರದ ವಿಷ್ಣುವಿನ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿತ್ತು ಆದರೆ ಇತ್ತೀಚೆಗೆ ಥೈಲ್ಯಾಂಡ್ ಮಿಲಿಟರಿ ಸಿಬ್ಬಂದಿ ಜೆಸಿಬಿ ಬಳಸಿ ವಿಷ್ಣು ಪ್ರತಿಮೆಯನ್ನು ನೆಲಸಮ ಮಾಡಿದ್ದಾರೆ ಅಲ್ಲದೆ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಘಟನೆ ಕುರಿತು ಪ್ರತಿಕ್ರಿಯಿಸಿದ್ದ ಭಾರತದ ವಿದೇಶಾಂಗ ಸಚಿವಾಲಯವು, ಇಂತಹ ಕೃತ್ಯಗಳು ವಿಶ್ವಾದ್ಯಂತ ಇರುವ ಭಕ್ತರ ಭಾವನೆಗಳಿಗೆ ನೋವುಂಟು ಮಾಡುತ್ತವೆ. ಅಲ್ಲದೆ, ಗಡಿ ಸಮಸ್ಯೆಯನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹರಿಸಿಕೊಳ್ಳುವಂತೆ ಉಭಯ ರಾಷ್ಟ್ರಗಳಿಗೆ ಭಾರತ ಮನವಿ ಮಾಡಿದೆ. ಇದಕ್ಕೆ ಥೈಲ್ಯಾಂಡ್ ಸರಕಾರ ಸ್ಪಷ್ಟನೆಯನ್ನೂ ನೀಡಿದ್ದು ಪ್ರತಿಮೆ ನಿರ್ಮಿಸಲಾದ ಪ್ರದೇಶವು ವಿವಾದಿತ ಗಡಿಯಾಗಿದ್ದು, ಭೂಪ್ರದೇಶದ ಮೇಲಿನ ಹತೋಟಿಯನ್ನು ಪಡೆಯಲು ಜೊತೆಗೆ ಭದ್ರತಾ ದೃಷ್ಟಿಯಿಂದ ಈ ಪ್ರತಿಮೆಯನ್ನು ತೆರವುಗೊಳಿಸಲಾಗಿದೆ, ಅಲ್ಲದೆ ಕಾಂಬೋಡಿಯಾ ಸೈನಿಕರು ಥೈಲ್ಯಾಂಡ್ ವಶದಲ್ಲಿರುವ ಭೂಮಿಯ ಮೇಲೆ ತಮ್ಮ ಹಕ್ಕನ್ನು ಸ್ಥಾಪಿಸಲು ಈ ಪ್ರತಿಮೆಯನ್ನು ಒಂದು ಗುರುತಾಗಿ ಬಳಸುತ್ತಿದ್ದರು ಎಂದು ಥೈಲ್ಯಾಂಡ್ ಹೇಳಿಕೊಂಡಿದೆ.