ವಾಷಿಂಗ್ಟನ್ : ಅಮೆರಿಕಾದ ಅಧ್ಯಕ್ಷತೆಯಲ್ಲಿ 2026ರಲ್ಲಿ ಫ್ಲೋರಿಡಾದಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ದಕ್ಷಿಣ ಆಫ್ರಿಕಾ ಆಹ್ವಾನ ಪಡೆಯುವುದಿಲ್ಲ. ಆ ರಾಷ್ಟ್ರವು ಎಲ್ಲಿಯೂ ಸದಸ್ಯತ್ವಕ್ಕೆ ಯೋಗ್ಯವಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ದಕ್ಷಿಣ ಆಫ್ರಿಕಾದಿಂದ ಜಿ20 ಅಧ್ಯಕ್ಷತೆಯನ್ನು ಪಡೆದಿರುವ ಅಮೆರಿಕಾ 2025ರ ಡಿಸೆಂಬರ್ 1ರಿಂದ 2026ರ ನವೆಂಬರ್ 30ರವರೆಗೆ ಅಧ್ಯಕ್ಷತೆ ವಹಿಸಲಿದೆ. `ಆಫ್ರಿಕಾದಲ್ಲಿ ಶ್ವೇತವರ್ಣೀಯರ ವಿರುದ್ಧದ ಭಯಾನಕ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಕ್ರಮ ಕೈಗೊಳ್ಳಬೇಕೆಂಬ ನಮ್ಮ ಆಗ್ರಹವನ್ನು ಅಲ್ಲಿಯ ಸರಕಾರ ತಿರಸ್ಕರಿಸಿದೆ. ಆ ದೇಶವು ಎಲ್ಲಿಯೂ ಸದಸ್ಯತ್ವ ಪಡೆಯಲು ಯೋಗ್ಯವಾಗಿಲ್ಲ ಎಂಬುದನ್ನು ಅಲ್ಲಿಯ ಸರಕಾರ ಜಗತ್ತಿಗೆ ಜಾಹೀರುಪಡಿಸಿದೆ. ತಕ್ಷಣದಿಂದ ಅನ್ವಯಿಸುವಂತೆ ಅವರಿಗೆ ಎಲ್ಲಾ ಸಬ್ಸಿಡಿ ಹಾಗೂ ಪಾವತಿಗಳನ್ನು ಸ್ಥಗಿತಗೊಳಿಸಲಾಗುವುದು. ಜಿ20 ಶೃಂಗಸಭೆಯ ಅಂತ್ಯದಲ್ಲಿ ಅಮೆರಿಕಾದ ಉನ್ನತ ಪ್ರತಿನಿಧಿಗೆ ಅಧ್ಯಕ್ಷತೆ ಹಸ್ತಾಂತರಿಸಲು ಅವರು ನಿರಾಕರಿಸಿರುವುದರಿಂದ ಮುಂದಿನ ವರ್ಷ ಫ್ಲೋರಿಡಾದಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ಅವರಿಗೆ ಆಹ್ವಾನ ನೀಡುವುದಿಲ್ಲ' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಟ್ರಂಪ್ ಅವರ ವಿಷಾದನೀಯ ಹೇಳಿಕೆಯನ್ನು ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಮಫೋಸ ಗಮನಿಸಿದ್ದಾರೆ ಎಂದು ಅಧ್ಯಕ್ಷರ ಕಚೇರಿ ಹೇಳಿದೆ. `ಅಮೆರಿಕಾದ ಉನ್ನತ ಪ್ರತಿನಿಧಿಗಳು ಶೃಂಗಸಭೆಗೆ ಹಾಜರಾಗಿದ್ದರೆ ಸಭೆಯಲ್ಲೇ ಅಧಿಕಾರ ಹಸ್ತಾಂತರಿಸಬಹುದಿತ್ತು. ಆದರೆ ರಾಯಭಾರಿ ಕಚೇರಿಯ ಕಿರಿಯ ಸಿಬ್ಬಂದಿ ಸಮಾರೋಪದಲ್ಲಿ ಪಾಲ್ಗೊಂಡಿದ್ದರು. ಆದ್ದರಿಂದ ಶೃಂಗಸಭೆ ಮುಗಿದ ಬಳಿಕ ಅಧಿಕಾರಿಗಳ ಮಟ್ಟದಲ್ಲಿ ಅಧಿಕಾರ ಹಸ್ತಾಂತರಿಸಲಾಗಿದೆ. ಜಿ20ರ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿ ದಕ್ಷಿಣ ಆಫ್ರಿಕಾವು ಯಾವತ್ತೂ ಒಮ್ಮತ, ಸಹಯೋಗ ಮತ್ತು ಪಾಲುದಾರಿಕೆಯ ಮೌಲ್ಯವನ್ನು ಗೌರವಿಸಿದೆ. ದಕ್ಷಿಣ ಆಫ್ರಿಕಾ ಸ್ವಂತ ಹೆಸರಿನಲ್ಲಿ ಮತ್ತು ಹಕ್ಕಿನಲ್ಲಿ ಜಿ20 ಸದಸ್ಯತ್ವ ಪಡೆದಿದೆ ಮತ್ತು ಅದರ ಸದಸ್ಯತ್ವವು ಇತರ ದೇಶಗಳ ಅನುಮೋದನೆ ಪಡೆದಿದೆ. ದಕ್ಷಿಣ ಆಫ್ರಿಕಾವು ಸಾರ್ವಭೌಮ, ಸಾಂವಿಧಾನಿಕ ಪ್ರಜಾಸತ್ತಾತ್ಮಕ ರಾಷ್ಟ್ರವಾಗಿದೆ ಮತ್ತು ಅದರ ಸದಸ್ಯತ್ವ ಮತ್ತು ಜಾಗತಿಕ ವೇದಿಕೆಯಲ್ಲಿ ಪಾಲ್ಗೊಳ್ಳುವ `ಯೋಗ್ಯತೆ'ಯ ಬಗ್ಗೆ ಮತ್ತೊಂದು ದೇಶದ ಅವಮಾನವನ್ನು ಶ್ಲಾಘಿಸುವುದಿಲ್ಲ' ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.