ಕೆನಡ : ಕೆನಡಾದಲ್ಲಿನ ಖಲಿಸ್ತಾನಿಗಳು ಜನಾಭಿಪ್ರಾಯ ಸಂಗ್ರಹದ ಮೂಲಕ ಪಂಜಾಬ ಅನ್ನು ಭಾರತದಿಂದ ಬೇರ್ಪಡಿಸಲು ಮುಂದಾಗಿದ್ದಾರೆ. ನವೆಂಬರ್ 23 ರಂದು ಒಟ್ಟಾವಾದಲ್ಲಿ ಈ ಹಿನ್ನೆಲೆಯಲ್ಲಿ ಆಯೋಜಿಸಲಾದ ಒಂದು ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲಾಯಿತು. ಹಾಗೆಯೇ, ಪ್ರಧಾನಿ ಮೋದಿ ಮತ್ತು ಆಡಳಿತಾತ್ಮಕ ಅಧಿಕಾರಿಗಳನ್ನು 'ಹತ್ಯೆ ಮಾಡಬೇಕು' ಎಂದು ಘೋಷಣೆ ನೀಡಲಾಯಿತು. ಆದರೆ ಈ ಕಾರ್ಯಕ್ರಮದಲ್ಲಿ ಕೇವಲ ಶೇ. 6 ರಷ್ಟು ಸಿಖ್ ನಾಗರಿಕರು ಮಾತ್ರ ಭಾಗವಹಿಸಿದ್ದಾರೆ ಎಂದು ಸ್ವತಃ ಈ ಖಲಿಸ್ತಾನಿ ಭಯೋತ್ಪಾದಕರು ಒಪ್ಪಿಕೊಂಡಿದ್ದಾರೆ. 'ಖಲಿಸ್ತಾನ್ ರೆಫರೆಂಡಮ್ (ಜನಮತ ಸಂಗ್ರಹ)' ಎಂಬ ಹೆಸರಿನಲ್ಲಿ ಆಯೋಜಿಸಲಾದ ಈ ಮತದಾನದಲ್ಲಿ, ಪಂಜಾಬ್ ರಾಜ್ಯವನ್ನು ಭಾರತದಿಂದ ಬೇರ್ಪಡಿಸಿ ಒಂದು ಹೊಸ ಸ್ವತಂತ್ರ ದೇಶವಾದ ಖಲಿಸ್ತಾನ್ ಮಾಡಬೇಕೇ? ಎಂಬ ಪ್ರಶ್ನೆಯನ್ನು ಕೇಳಲಾಗುತ್ತಿತ್ತು. ಜನರು ಬೆಳಗಿನಿಂದ ಸಂಜೆಯವರೆಗೆ ಹಳದಿ ಬಣ್ಣದ ಖಲಿಸ್ತಾನ್ ಧ್ವಜಗಳನ್ನು ಕೈಯಲ್ಲಿ ಹಿಡಿದು ಸುಮಾರು 2 ಕಿಲೋಮೀಟರ್ ಉದ್ದದ ಸರತಿ ಸಾಲಿನಲ್ಲಿ ನಿಂತಿದ್ದರು. ಖಲಿಸ್ತಾನಿ ಭಯೋತ್ಪಾದಕ ಸಂಘಟನೆ 'ಸಿಖ್ ಫಾರ್ ಜಸ್ಟಿಸ್' ಈ ಭಾರತ-ದ್ವೇಷಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆಯೋಜಕರು, ಒಂಟಾರಿಯೊ, ಆಲ್ಬರ್ಟಾ, ಬ್ರಿಟಿಷ್ ಕೊಲಂಬಿಯಾ ಮತ್ತು ಕ್ಯೂಬೆಕ್ ಪ್ರಾಂತ್ಯಗಳಿಂದ 53 ಸಾವಿರಕ್ಕೂ ಹೆಚ್ಚು ಸಿಖ್ಖರು ಮತದಾನ ಮಾಡಲು ಬಂದಿದ್ದರು ಎಂದು ಹೇಳಿಕೊಂಡಿದ್ದಾರೆ. ಆದರೆ ಹಾಸ್ಯಾಸ್ಪದ ಸಂಗತಿಯೆಂದರೆ, ಈ ಸಂಖ್ಯೆಯು ಕೆನಡಾದ ಒಟ್ಟು ಸಿಖ್ ನಾಗರಿಕರ ಕೇವಲ ಶೇ. 6 ರಷ್ಟು ಮಾತ್ರ ಆಗಿದೆ. ಈ ಸಮಯದಲ್ಲಿ ಭಯೋತ್ಪಾದಕ ಗುರಪತವಂತ್ ಸಿಂಗ್ ಪನ್ನೂ ಅಮೆರಿಕಾದಿಂದಲೇ ಉಪಸ್ಥಿತ ಖಲಿಸ್ತಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ಭಾರತ ಸರಕಾರವು ಈ ಆಯೋಜನೆಯನ್ನು ಕಾನೂನುಬಾಹಿರ ಎಂದು ಘೋಷಿಸಿದ್ದು, ಇದು ಭಾರತದ ಸಾರ್ವಭೌಮತ್ವದ ಮೇಲಿನ ಆಕ್ರಮಣ ಎಂದು ಹೇಳಿದೆ.