ಇಸ್ಲಾಮಾಬಾದ್: ಅಫ್ಘಾನಿಸ್ತಾನದ ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನಿ ಪಡೆಗಳು ರಾತ್ರಿಯಿಡೀ ನಡೆಸಿದ ವೈಮಾನಿಕ ದಾಳಿಯಲ್ಲಿ ಒಂಬತ್ತು ಮಕ್ಕಳು ಮತ್ತು ಒಬ್ಬ ಮಹಿಳೆ ಸೇರಿದಂತೆ ಕನಿಷ್ಠ 10 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ಸರ್ಕಾರಿ ವಕ್ತಾರರು ತಿಳಿಸಿರುವುದಾಗಿ ವರದಿಯಾಗಿದೆ. ಹಲವಾರು ಗಡಿ ಪ್ರಾಂತ್ಯಗಳ ಮೇಲೆ ದಾಳಿಗಳು ನಡೆದಿದ್ದು, ಇದು ಅಸ್ಥಿರವಾದ ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯಲ್ಲಿ ತೀವ್ರ ಉದ್ವಿಗ್ನಕ್ಕೆ ಕಾರಣವಾಗಿರುವುದಾಗಿ ವರದಿ ವಿವರಿಸಿದೆ. ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಗಡಿಯಾಚೆಗಿನ ದಾಳಿಯ ಪರಿಣಾಮಗಳ ಬಗ್ಗೆ ಎಚ್ಚರಿಸಿದ್ದಾರೆ. ಪೂರ್ವ ಗಡಿ ಪ್ರದೇಶಗಳಲ್ಲಿನ ವಸತಿ ಪ್ರದೇಶವನ್ನು ಗುರಿಯಾಗಿಸಿಕೊಂಡು ಈ ಭೀಕರ ದಾಳಿ ನಡೆಸಲಾಗಿದೆ.ಕುನಾರ್ ಮತ್ತು ಪಕ್ತಿಕಾ ಗಡಿ ಪ್ರದೇಶಗಳ ಮೇಲೆ ಪಾಕಿಸ್ತಾನ ನಡೆಸಿದ ಪ್ರತ್ಯೇಕ ವಾಯುದಾಳಿಗಳಲ್ಲಿ ಇನ್ನೂ ನಾಲ್ವರು ನಾಗರಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಖೋಸ್ಟ್ ಪ್ರಾಂತ್ಯದ ಗೆರ್ಬಾಜ್ ಜಿಲ್ಲೆಯ ಮುಘಲ್‌ಗೇ ಪ್ರದೇಶದ ಸ್ಥಳೀಯ ನಿವಾಸಿಯೊಬ್ಬರ ಮನೆಯ ಮೇಲೆ ದಾಳಿ ನಡೆದಿದೆ ಎಂದು ಮುಜಾಹಿದ್ ತಿಳಿಸಿದ್ದಾರೆ. ಐದು ಬಾಲಕರು, ನಾಲ್ಕು ಬಾಲಕಿಯರು ಮತ್ತು ಒಬ್ಬ ಮಹಿಳೆ ಸಾವನ್ನಪ್ಪಿದರು. ಮನೆ ಸಂಪೂರ್ಣವಾಗಿ ನಾಶವಾಗಿರುವುದಾಗಿ ವರದಿ ತಿಳಿಸಿದೆ.