ಜೋಹಾನ್ಸ್‌ಬರ್ಗ್ : ಜಿ-20 ಶೃಂಗದ ಮುಕ್ತಾಯದ ವೇಳೆ ಅದರ ಅಧ್ಯಕ್ಷತೆಯ ದಂಡವನ್ನು ಅಮೆರಿಕದ ಕಿರಿಯ ಅಧಿಕಾರಿಗೆ ಹಸ್ತಾಂತರಿಸದಿರಲು ದಕ್ಷಿಣ ಆಫ್ರಿಕಾ ನಿರ್ಧರಿಸಿದೆ. 'ಅಮೆರಿಕದ ಮಾರ್ಕ್ ಡಿಲಾರ್ಡ್ ಅವರ ನೇತೃತ್ವದ ಎಂಟು ಮಂದಿಯ ತಂಡವು ಜಿ-20 ಅಧ್ಯಕ್ಷತೆಯ ದಂಡವನ್ನು ಭಾನುವಾರ ಸ್ವೀಕರಿಸಲಿದೆ' ಎಂದು ಅಮೆರಿಕವು ದಕ್ಷಿಣ ಆಫ್ರಿಕಾಕ್ಕೆ ತಿಳಿಸಿತ್ತು. 'ಕಿರಿಯ ಅಧಿಕಾರಿಗೆ ಅಧ್ಯಕ್ಷರು ದಂಡ ಹಸ್ತಾಂತರ ಮಾಡುವುದಿಲ್ಲ. ಹಾಗೆ ಮಾಡಿದರೆ ಶಿಷ್ಠಾಚಾರದ ಉಲ್ಲಂಘನೆಯಾಗುತ್ತದೆ. ಯಾವುದೇ ದೇಶ ಅಥವಾ ಅಲ್ಲಿನ ಮುಖ್ಯಸ್ಥರು ಇಂಥ ಕಾರ್ಯವನ್ನು ಮಾಡುವುದಿಲ್ಲ' ಎಂದು ದಕ್ಷಿಣ ಆಫ್ರಿಕಾದ ಅಧ್ಯಕ್ಷರ ವಕ್ತಾರರು ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ಅಧ್ಯಕ್ಷ ರಾಮಫೋಸ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಮಂಗಳವಾರ ಪರೋಕ್ಷವಾಗಿ ಟೀಕಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ 'ರಾಮಫೋಸ ನಾಲಿಗೆ ಹರಿಬಿಡಬಾರದು' ಎಂದು ಎಚ್ಚರಿಕೆ ನೀಡಿದ್ದರು. ಆ ಬಗ್ಗೆಯೂ ದಕ್ಷಿಣ ಆಫ್ರಿಕಾ ಆಕ್ರೋಶಗೊಂಡಿದೆ. 'ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಜಿ-20 ಶೃಂಗಕ್ಕೆ ನಾನು ಹೋಗುವುದಿಲ್ಲ. ಜನರ ನಾಶಕ್ಕೆ ಕಾರಣವಾಗುವ ಅವರ ನೀತಿಗಳು ಸ್ವೀಕಾರಾರ್ಹವಲ್ಲ. ಅದು ತುಂಬಾ ಕೆಟ್ಟದಾಗಿ ವರ್ತಿಸುತ್ತಿದೆ' ಎಂದು ಟ್ರಂಪ್ ಹೇಳಿದ್ದರು.