ಇಸ್ಲಮಾಬಾದ್ : ಭಾರತದ ಜೊತೆಗೆ ಅಫ್ಘಾನಿಸ್ತಾನದೊಂದಿಗೂ ಪಾಕಿಸ್ತಾನ ಕ್ಯಾತೆ ತೆಗೆದಿತ್ತು. ಅಫ್ಘಾನಿಸ್ತಾನದ ತಾಲಿಬಾನ್ ಪಾಕಿಸ್ತಾನದ ಮೇಲೆ ದಾಳಿ ನಡೆಸಿತ್ತು. ಈ ಎರಡೂ ದೇಶಗಳ ನಡುವಿನ ದಾಳಿಯನ್ನು ನಿಲ್ಲಿಸಿ ಕದನವಿರಾಮ ಘೋಷಿಸಲು ಟರ್ಕಿಯಲ್ಲಿ ಶಾಂತಿ ಮಾತುಕತೆ ನಡೆಯುತ್ತಿದೆ. ಆದರೂ ನಿಯತ್ತಿಲ್ಲದ ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘಿಸಿ ಅಫ್ಘಾನಿಸ್ತಾನದ ಮೇಲೆ ಮತ್ತೆ ದಾಳಿ ನಡೆಸಿದೆ. ಈ ಮೂಲಕ ಮತ್ತೊಮ್ಮೆ ತನ್ನ ಕುತಂತ್ರ ಬುದ್ಧಿಯನ್ನು ಜಗತ್ತಿನ ಮುಂದೆ ತಾನೇ ಬಯಲು ಮಾಡಿಕೊಂಡಿದೆ.
ಟರ್ಕಿಯಲ್ಲಿ ಎರಡೂ ದೇಶಗಳ ನಿಯೋಗಗಳು ತಮ್ಮ ದುರ್ಬಲವಾದ ಕದನ ವಿರಾಮವನ್ನು ಸ್ಥಿರಗೊಳಿಸುವ ಗುರಿಯನ್ನು ಹೊಂದಿದೆ. ಶಾಂತಿ ಮಾತುಕತೆಗಳನ್ನು ಪುನರಾರಂಭಿಸಲು ಭೇಟಿಯಾದ ನಂತರವೂ ಪಾಕಿಸ್ತಾನ ಸೇನೆಯು ಇಂದು ಅಫ್ಘಾನಿಸ್ತಾನದ ಮೇಲೆ ಸ್ಪೋಟಕಗಳನ್ನು ಹಾರಿಸಿದೆ. “ಪಾಕಿಸ್ತಾನವು ಭಾರೀ ಶಸ್ತ್ರಾಸ್ತ್ರಗಳನ್ನು ಬಳಸಿತು ಮತ್ತು ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿತು” ಎಂದು ಅಫ್ಘಾನ್ ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಎರಡೂ ದೇಶಗಳ ನಡುವೆ ನಡೆಯುತ್ತಿರುವ ಮಾತುಕತೆಗಳಿಗೆ ಗೌರವ ನೀಡಿ ನಾವು ಇನ್ನೂ ಪ್ರತೀಕಾರ ತೀರಿಸಿಕೊಂಡಿಲ್ಲ” ಎಂದು ಅಫ್ಘಾನಿಸ್ತಾನದ ಅಧಿಕಾರಿ ಹೇಳಿದ್ದಾರೆ.
ಎರಡೂ ದೇಶಗಳ ನಡುವಿನ ಅತ್ಯಂತ ಭೀಕರ ಘರ್ಷಣೆಗಳ ನಂತರ ಮತ್ತೆ ಯುದ್ಧ ನಡೆಸುವುದನ್ನು ತಡೆಯುವ ಉದ್ದೇಶದಿಂದ ಅಫ್ಘಾನ್ ಮತ್ತು ಪಾಕಿಸ್ತಾನಿ ಸಂಧಾನಕಾರರು ಇಂದು ಟರ್ಕಿಯಲ್ಲಿ ಶಾಂತಿ ಮಾತುಕತೆಗಳನ್ನು ಪುನರಾರಂಭಿಸುತ್ತಿದ್ದಾರೆ. ಪಾಕಿಸ್ತಾನವು ಅಫ್ಘಾನಿಸ್ತಾನದೊಳಗೆ ದಾಳಿ ನಡೆಸುವ ಭಯೋತ್ಪಾದಕ ಗುಂಪು ಇಸ್ಲಾಮಿಕ್ ಸ್ಟೇಟ್ (ISIS)ನ ಒಂದು ಶಾಖೆಗೆ ಆಶ್ರಯ ನೀಡುತ್ತಿದೆ ಮತ್ತು ಬೆಂಬಲ ನೀಡುತ್ತಿದೆ ಎಂದು ಅಫ್ಘಾನಿಸ್ತಾನವು ಹೇಳಿಕೊಂಡಿದೆ. ಅಕ್ಟೋಬರ್ 9ರಂದು ಕಾಬೂಲ್‌ನಲ್ಲಿ ನಡೆದ ಸ್ಫೋಟಗಳ ನಂತರ ಎರಡೂ ದೇಶಗಳ ನಡುವೆ ಹೋರಾಟ ಭುಗಿಲೆದ್ದಿತು. ಇದಕ್ಕೆ ಪಾಕಿಸ್ತಾನ ಕಾರಣವೆಂದು ತಾಲಿಬಾನ್ ಸರ್ಕಾರ ಆರೋಪಿಸಿ, ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿತು. ಅಕ್ಟೋಬರ್ 19ರಂದು ಕತಾರ್ ಮಧ್ಯಸ್ಥಿಕೆ ವಹಿಸಿದ ನಂತರ ಹಿಂಸಾಚಾರ ನಿಂತುಹೋಯಿತು. ಎರಡೂ ದೇಶಗಳ ನಡುವೆ ಕದನವಿರಾಮ ಇನ್ನೂ ಜಾರಿಯಲ್ಲಿದೆ. ಆದರೆ, ಅದನ್ನು ಉಲ್ಲಂಘಿಸಿರುವ ಪಾಕಿಸ್ತಾನ ಅಫ್ಘಾನ್ನೊಳಗೆ ನುಗ್ಗಿದೆ.