ಇಸ್ಲಾಮಾಬಾದ್ : ನಂಕಾನಾ ಸಾಹಿಬ್ ನಲ್ಲಿ ಗುರುನಾನಕ್ ದೇವ್ ಅವರ ಜನ್ಮ ವಾರ್ಷಿಕೋತ್ಸವದ ಆಚರಣೆಗೆ ಹಾಜರಾಗಲು ಮಾನ್ಯ ವೀಸಾಗಳನ್ನು ಹೊಂದಿದ್ದರೂ 300ಕ್ಕೂ ಹೆಚ್ಚು ಹಿಂದು ಮತ್ತು ಸಿಖ್ ಯಾತ್ರಾರ್ಥಿಗಳಿಗೆ ಗಡಿಯಲ್ಲಿ ಪ್ರವೇಶವನ್ನು ನಿರಾಕರಿಸಲಾಗಿದೆ ಎಂಬ ವರದಿಯ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಸರಕಾರ, ಭದ್ರತೆಯ ಕಾರಣಕ್ಕಾಗಿ ಈ ಕ್ರಮ ಕೈಗೊಂಡಿರುವುದಾಗಿ ಸಮರ್ಥಿಸಿಕೊಂಡಿದೆ. 'ವ್ಯಕ್ತಿಗಳು ಸೂಕ್ತ ದಾಖಲೆಯನ್ನು ತೋರಿಸಲು ವಿಫಲವಾಗಿದ್ದಾರೆ ಮತ್ತು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಉದ್ದೇಶವನ್ನು ಮನವರಿಕೆ ಮಾಡಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಯಾತ್ರಾರ್ಥಿಗಳನ್ನು ಗಡಿಭಾಗದಲ್ಲಿ ತಡೆಯಲಾಗಿದೆ' ಎಂದು ಹಿರಿಯ ವಲಸೆ ಅಧಿಕಾರಿಗಳನ್ನು ಉಲ್ಲೇಖಿಸಿ ಸಿಎನ್‌ಎನ್-ನ್ಯೂಸ್ 18 ವರದಿ ಮಾಡಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸುಮಾರು 1,800 ಭಾರತೀಯ ಸಿಖ್ ಯಾತ್ರಾರ್ಥಿಗಳಿಗೆ ವಾಘಾ ಗಡಿ ದಾಟಲು ಪಾಕಿಸ್ತಾನ ಅವಕಾಶ ಒದಗಿಸಿದ್ದರೂ 304 ಹಿಂದು ಮತ್ತು ಸಿಖ್ ಯಾತ್ರಾರ್ಥಿಗಳನ್ನು ವಾಘಾ ಗಡಿಯಿಂದಲೇ ವಾಪಾಸು ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಇದು ಧಾರ್ಮಿಕ ದೇಗುಲಗಳಿಗೆ ಭೇಟಿ ನೀಡುವ 1974ರ ದ್ವಿಪಕ್ಷೀಯ ಶಿಷ್ಟಾಚಾರದ ನಿಯಮಕ್ಕೆ ವಿರುದ್ಧವಾಗಿದೆ ಎಂದು ಭಾರತ ಖಂಡಿಸಿದೆ.