ಪಾಕಿಸ್ತಾನ - ಹಿಂದೂಗಳು ನಮ್ಮ ಮೇಲೆ ಎಂದಿಗೂ ಅಮಾನವೀಯ ರೀತಿಯಲ್ಲಿ ಮಾಡದಷ್ಟು ದೌರ್ಜನ್ಯವನ್ನು ಪಾಕಿಸ್ತಾನದ ಸೈನಿಕರು ಜೈಲಿನಲ್ಲಿ ಮಾಡಿದ್ದಾರೆ. ಜೈಲಿನಲ್ಲಿರುವ ಅನೇಕ ಉಲೇಮಾಗಳು (ಧಾರ್ಮಿಕ ವಿದ್ವಾಂಸರು) ಕುರಾನ್ ಮೇಲೆ ಕೈ ಇಟ್ಟು, ಒಂದು ವೇಳೆ ಭಾರತವು ಪಾಕಿಸ್ತಾನದ ಮೇಲೆ ಆಕ್ರಮಣ ಮಾಡಿದರೆ, ನಾವು ಭಾರತಕ್ಕೆ ಬೆಂಬಲ ನೀಡುತ್ತೇವೆ, ಎಂದು ಪ್ರಮಾಣ ಮಾಡಿದ್ದಾರೆ ಎನ್ನುವ ಹೇಳಿಕೆ ನೀಡಿದ ಪಾಕಿಸ್ತಾನದ ಖೈಬರ್ ಪಖ್ತೂನ್ ಖ್ವಾ ಪ್ರಾಂತ್ಯದ ಮೌಲವಿ ಗುಲ್ಜಾರ ಅವರನ್ನು ಬಂಧಿಸಲಾಗಿದೆ. ಸಾರ್ವಜನಿಕ ಸಭೆಯೊಂದರಲ್ಲಿ ಸೇನೆ ಮತ್ತು ಗುಪ್ತಚರ ಇಲಾಖೆಗಳ ಬಗ್ಗೆ ಗುಲ್ಜಾರ್ ಟೀಕಿಸಿದ ನಂತರ ಪಾಕಿಸ್ತಾನಿ ಗುಪ್ತಚರ ಸಂಸ್ಥೆಗಳು ಅವರನ್ನು ಬಂಧಿಸಿವೆ. ಗುಲ್ಜಾರ್ ತಮ್ಮ ಭಾಷಣದಲ್ಲಿ, ಪಾಕಿಸ್ತಾನಿ ಸೇನೆಯು ಮುಸಲ್ಮಾನರು ಮತ್ತು ಮದರಸಾದ ವಿದ್ಯಾರ್ಥಿಗಳಿಗೆ ನೀಡಿದಷ್ಟು ಅಮಾನವೀಯ ವರ್ತನೆಯನ್ನು ಯಾವುದೇ ಹಿಂದೂ ಅಥವಾ ಭಾರತೀಯ ಸೈನಿಕರು ನೀಡಿಲ್ಲ ಎಂದು ಹೇಳಿದ್ದರು. ಭಾರತೀಯ ಸೇನೆಯು ಪಾಕಿಸ್ತಾನಿ ಸೇನೆಗಿಂತ ಹೆಚ್ಚು ಮನುಷ್ಯತ್ವವನ್ನು ಹೊಂದಿದೆ ಎಂದಿದ್ದರು. ತಜ್ಞರ ಪ್ರಕಾರ, ಮೌಲವಿ ಗುಲ್ಜಾರ್ ಅವರ ಹೇಳಿಕೆಯು ಪಾಕಿಸ್ತಾನಿ ಸೇನೆಯ ಪ್ರತಿಷ್ಠೆಯ ಕುಸಿತ ಮತ್ತು ಜನರಲ್ಲಿ ಹೆಚ್ಚುತ್ತಿರುವ ಅಸಮಾಧಾನದ ಸ್ಪಷ್ಟ ಸಂಕೇತವಾಗಿದೆ. ಧಾರ್ಮಿಕ ನಾಯಕರಿಂದ ಬಹಿರಂಗವಾಗಿ ಭಾರತಕ್ಕೆ ಬೆಂಬಲ ದೊರೆಯುತ್ತಿರುವುದು ಪಾಕಿಸ್ತಾನದ ರಾಷ್ಟ್ರೀಯ ಏಕತೆ ಮತ್ತು ಸೇನೆಯ ನಿಯಂತ್ರಣಕ್ಕೆ ದೊಡ್ಡ ಎಚ್ಚರಿಕೆ ಎಂದು ಪರಿಗಣಿಸಲಾಗಿದೆ. ಈ ಘಟನೆಯು ಪಾಕಿಸ್ತಾನದಲ್ಲಿನ ಆಂತರಿಕ ಅಸ್ಥಿರತೆ ಮತ್ತು ಭದ್ರತಾ ವ್ಯವಸ್ಥೆಗಳ ಮಿತಿಗಳಿಗೆ ಸಾಕ್ಷಿಯಾಗಿದೆ, ಇದು ದೇಶದ ಸ್ಥಿರತೆಗೆ ಗಂಭೀರ ಸವಾಲನ್ನು ಒಡ್ಡಬಹುದು.