image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಇಸ್ತಾಂಬುಲ್‌ನಲ್ಲಿ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಉಭಯ ರಾಷ್ಟ್ರಗಳ ನಡುವೆ ನಡೆದಿದ್ದ ಶಾಂತಿ ಮಾತುಕತೆ ವಿಫಲ

ಇಸ್ತಾಂಬುಲ್‌ನಲ್ಲಿ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಉಭಯ ರಾಷ್ಟ್ರಗಳ ನಡುವೆ ನಡೆದಿದ್ದ ಶಾಂತಿ ಮಾತುಕತೆ ವಿಫಲ

ಇಸ್ತಾಂಬುಲ್: ರೋಗಿ ಬಯಸಿದ್ದೂ ಹಾಲು-ಅನ್ನ, ವೈದ್ಯರು ಹೇಳಿದ್ದೂ ಹಾಲು-ಅನ್ನ ಎಂಬಂತೆ, ಸದಾ ಯುದ್ಧವನ್ನೇ ಬಯಸುವ ಪಾಕಿಸ್ತಾನಕ್ಕೆ ಅಫ್ಘಾನಿಸ್ತಾನದೊಂದಿಗಿನ ʻಓಪನ್‌ ವಾರ್‌ʼ ಮುಂದುವರೆಸುವ ಅವಕಾಶ ದೊರೆತಿದೆ. ಏಕೆಂದರೆ ಟರ್ಕಿ ರಾಜಧಾನಿ ಇಸ್ತಾಂಬುಲ್‌ನಲ್ಲಿ ಉಭಯ ರಾಷ್ಟ್ರಗಳ ನಡುವೆ ನಡೆದಿದ್ದ ಶಾಂತಿ ಮಾತುಕತೆ ವಿಫಲವಾಗಿದೆ. ಡ್ಯುರಾಂಡ್‌ ಲೈನ್‌ ಗಡಿ ವಿವಾದಕ್ಕೆ ಸಂಬಂಧಿಸಿದ್ದಂತೆ ದೀರ್ಘಾವಧಿಯ ಒಪ್ಪಂದವನ್ನು ಸ್ಥಾಪಿಸಲು, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವೆ ನಡೆದಿದ್ದ ಶಾಂತಿ ಮಾತುಕತೆಗಳು ವಿಫಲವಾಗಿವೆ. ಈ ಕುರಿತು ಉಭಯ ಬಣಗಳೂ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಶಾಂತಿ ಮಾತುಕತೆ ವೈಫಲ್ಯಕ್ಕೆ ಪರಸ್ಪರರನ್ನು ದೂಷಿಸಿವೆ. ಈ ಕುರಿತು ಮಾತನಾಡಿರುವ ಪಾಕಿಸ್ತಾನ ನಿಯೋಗದ ಸದಸ್ಯರು, "ತಾರ್ಕಿಕ ಮತ್ತು ಕಾನೂನುಬದ್ಧ ಬೇಡಿಕೆಗಳನ್ನು ಸ್ವೀಕರಿಸಲು ಕಾಬೂಲ್ ಹಿಂಜರಿಯುತ್ತಿರುವುದೇ ಬಿಕ್ಕಟ್ಟಿಗೆ ಕಾರಣ" ಎಂದು ಆರೋಪಿಸಿದ್ದಾರೆ. ಆದರೆ ಇದೇ ವಿಚಾರವಾಗಿ ಮಾತನಾಡಿರುವ ತಾಲಿಬಾನ್‌ ನಿಯೋಗ, "ನಮ್ಮ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಪಾಕಿಸ್ತಾನವು ಗಡಿ ವಿವಾದ ಇತ್ಯರ್ಥಕ್ಕೆ ಮನಸ್ಸು ಮಾಡಲಿಲ್ಲ" ಎಂದು ಹರಿಹಾಯ್ದಿದೆ.

ಇಸ್ತಾಂಬುಲ್‌ ಶಾಂತಿ ಮತುಕತೆ ವಿಫಲಗೊಂಡಿರುವ ಬಗ್ಗೆ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳೆರೆಡೂ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿವೆ. ಆದರೆ ಮಾತುಕತೆಯನ್ನು ಮುಂದುವರೆಸುವ ಬಗ್ಗೆ ಯಾವುದೇ ಪ್ರಸ್ತಾಪ ಮಾಡಲಾಗಿಲ್ಲ. ಇದು ಗಡಿಯಲ್ಲಿ ಉಭಯ ರಾಷ್ಟ್ರಗಳು ಮತ್ತೊಂದು ಸುತ್ತಿನ ಕಾದಾಟಕ್ಕೆ ಇಳಿಯಲಿವೆ ಎಂಬ ಅನುಮಾನ ಮೂಡಲು ಕಾರಣವಾಗಿದೆ. ಅಫ್ಘಾನಿಸ್ತಾನಕ್ಕೆ ಭಾರತದ ಪರೋಕ್ಷ ಬೆಂಬಲದ ಆರೋಪ ಮಾಡುತ್ತಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸೀಫ್‌, "ಒಂದು ವೇಳೆ ಶಾಂತಿ ಮಾತುಕತೆಗಳು ವಿಫಲವಾದರೆ, ಅಫ್ಘಾನಿಸ್ತಾನೊಂದಿಗೆ ನೇರ ಯುದ್ಧಕ್ಕೆ ಇಳಿಯುವುದಾಗಿ ಎಚ್ಚರಿಕೆ ನೀಡಿದ್ದರು. ಇದೀಗ ಇಸ್ತಾಂಬುಲ್‌ ಶಾಂತಿ ಮಾತುಕತೆ ವಿಫಲಗೊಂಡಿದ್ದರಿಂದ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಬಹಿರಂಗ ಸಂಘರ್ಷ ನಡೆಸಲಿವೆ ಎಂಬ ಆತಂಕ ಮೂಡಿದೆ. ಸದ್ಯ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಪ್ರತಿನಿಧಿಗಳು ಇನ್ನೂ ಟರ್ಕಿಯಲ್ಲಿದ್ದಾರಾದರೂ, ನಾಲ್ಕನೇ ಸುತ್ತಿನ ಶಾಂತಿ ಮಾತುಕತೆ ನಡೆಸುವ ಕುರಿತು ಯಾವುದೇ ಹೇಳಿಕೆ ನೀಡಿಲ್ಲ. ಹೀಗಾಗಿ ಡ್ಯುರಾಂಡ್‌ ಲೈನ್‌ನಲ್ಲಿ ಮತ್ತೆ ಯುದ್ಧದ ಕಾರ್ಮೋಡಗಳು ಕಾಣತೊಡಗಿವೆ.

ಕತಾರ್ ಮತ್ತು ಟರ್ಕಿಯ ಮಧ್ಯಸ್ಥಿಕೆಯಲ್ಲಿ ಅಫ್ಘಾನಿಸ್ತಾನ-ಪಾಕಿಸ್ತಾನ ನಡುವಿನ ಮೊದಲ ಸುತ್ತಿನ ಮಾತುಕತೆ, ಅಕ್ಟೋಬರ್ 18-19 ರಂದು ದೋಹಾದಲ್ಲಿ ನಡೆದಿತ್ತು. ಈ ಮಾತುಕತೆಯಲ್ಲಿ ಪಾಕಿಸ್ತಾನವು ಅಫ್ಘಾನಿಸ್ತಾನದ ವಿರುದ್ಧ ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಆರೋಪ ಹೊರಿಸಿತು. ದೋಹಾ ಮಾತುಕತೆ ಅಷ್ಟೇನು ಫಲಪ್ರದವಾಗಿರದಿದ್ದರೂ, ಅಫ್ಘಾನಿಸ್ತಾನ-ಪಾಕಿಸ್ತಾನ ನಡುವೆ 48 ಗಂಟೆಗಳ ಕದನ ವಿರಾಮ ಒಪ್ಪಂದ ಜಾರಿಗೊಳಿಸಲು ನೆರವಾಯಿತು. ಅದರ ಮುಂದಿನ ಭಾಗವಾಗಿ ಟರ್ಕಿ ರಾಜಧಾನಿ ಇಸ್ತಾಂಬುಲ್‌ನಲ್ಲಿ ಶಾಂತಿ ಮಾತುಕತೆಗಳು ಮುಂದುವರೆದವು. ಆದರೆ ಮೂರು ಸುತ್ತಿನ ಮಾತುಕತೆ ಬಳಿಕವೂ ಸರ್ವಸಮ್ಮತ ನಿರ್ಣುಯಕ್ಕೆ ಬರಲು ಉಭಯ ರಾಷ್ಟ್ರಗಳು ವಿಫಲಾಗಿವೆ. ಏತನ್ಮಧ್ಯೆ, ತಾಲಿಬಾನ್‌ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರು, ಈ ತಿಂಗಳ ಆರಂಭದಲ್ಲಿ ಭಾರತ ಪ್ರವಾಸ ಕೈಗೊಂಡಿದ್ದರು. ಈ ಭೇಟಿ ಅಫ್ಘಾನಿಸ್ತಾನ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಸಂಬಂಧ ಮರುಜೀವ ಪಡೆಯುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿತು. ಈ ಬೆಳವಣಿಗೆ ಪಾಕಿಸ್ತಾನದ ನಿದ್ದೆಗೆಡೆಸಿದ್ದರಲ್ಲಿ ಅಚ್ಚರಿ ಏನಿಲ್ಲ.

ತಾಲಿಬಾನ್‌ ವಿದೇಶಾಂಗ ಸಚಿವ ಅಮೀರ್‌ ಖಾನ್‌ ಮುತ್ತಕಿ ಮತ್ತು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ನಡುವಿನ ದ್ವಿಪಕ್ಷೀಯ ಮಾತುಕತೆ ಬಳಿಕ, ಭಾರತವು ಅಫ್ಘಾನಿಸ್ತಾನದೊಂದಿಗೆ ಸಂಪೂರ್ಣ ರಾಜತಾಂತ್ರಿಕ ಸಂಬಂಧಗಳನ್ನು ಪುನಃಸ್ಥಾಪಿಸಿತು. ಅಲ್ಲದೇ ಕಾಬೂಲ್‌ನಲ್ಲಿರುವ ಭಾರತದ ಕಾರ್ಯಾಚರಣೆ ಮಿಷನ್‌ನನ್ನು ರಾಯಭಾರ ಕಚೇರಿಯಾಗಿ ಮೇಲ್ದರ್ಜೇಗೇರಿಸಿತು. ಬಹುಮುಖ್ಯವಾಗಿ, ತಾಲಿಬಾನ್ ವಿದೇಶಾಂಗ ಸಚಿವರು ಪಾಕ್ ಮೂಲದ ಭಯೋತ್ಪಾದಕ ಗುಂಪು ನಡೆಸಿದ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸಿದರು. ತಾಲಿಬಾನ್ ತನ್ನ ನೆಲದಿಂದ ಭಾರತ ವಿರೋಧಿ ಚಟುವಟಿಕೆಗಳನ್ನು ಅನುಮತಿಸುವುದಿಲ್ಲ ಎಂದು ಅಮೀರ್‌ ಖಾನ್‌ ಮುತ್ತಕಿ ಅವರು ಭರವಸೆ ನೀಡಿದ್ದಾರೆ.

Category
ಕರಾವಳಿ ತರಂಗಿಣಿ