image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ದ. ಏಷ್ಯಾ ರಾಜಕೀಯದ ದಿಕ್ಕು ಬದಲಾವಣೆ : ಪಾಕಿಸ್ತಾನಕ್ಕೆ ಬಿಸಿತುಪ್ಪವಾದ ಭಾರತ-ತಾಲಿಬಾನ್ ಒಪ್ಪಂದ

ದ. ಏಷ್ಯಾ ರಾಜಕೀಯದ ದಿಕ್ಕು ಬದಲಾವಣೆ : ಪಾಕಿಸ್ತಾನಕ್ಕೆ ಬಿಸಿತುಪ್ಪವಾದ ಭಾರತ-ತಾಲಿಬಾನ್ ಒಪ್ಪಂದ

ನವದೆಹಲಿ : ಭಾರತದ ಮಟ್ಟಿಗೆ ತಾಲಿಬಾನ್-2.0 ಅಡಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಅಫ್ಘಾನ್ ಸಂಬಂಧವು ನಿರೀಕ್ಷೆಯೇ ಇಲ್ಲದ ರಾಜತಾಂತ್ರಿಕ ಉತ್ತೇಜನವಾಗಿದೆ. ಯಾಕೆಂದರೆ ಆ ಕಡೆ, ಪರಮ ಎದುರಾಳಿ ಪಾಕಿಸ್ತಾನ ಸೌದಿ ಅರೇಬಿಯಾದೊಂದಿಗೆ ಪರಸ್ಪರ ರಕ್ಷಣಾ ಒಪ್ಪಂದ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮತ್ತು ಭಾರತದ ಬಹುಕಾಲದ ಮಿತ್ರ ರಷ್ಯಾದಿಂದಲೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದೆ. ಆಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಖಿ ಅವರು ನವದೆಹಲಿಗೆ ಭೇಟಿ ನೀಡಿ ಭಾರತದ ವಿದೇಶಾಂಗ ವ್ಯವಹಾರಗಳ ಅಧಿಕಾರಿಗಳ ಜೊತೆ ವಿಸ್ತೃತ ಮಾತುಕತೆಗಳನ್ನು ನಡೆಸಿದ್ದು ಪಕ್ಕದ ಪಾಕಿಸ್ತಾನದ ಮುಖ ಕಪ್ಪಿಡಲು ಕಾರಣವಾಗಿದೆ. ಅದು ಈ ವಿದ್ಯಮಾನದ ಒಂದು ಭಾಗ ಮಾತ್ರ. ಆದರೆ ನಿಜಕ್ಕೂ ಆಟದ ದಿಕ್ಕು ಬದಲಿಸುವ ಅಂಶವೆಂದರೆ ಮುತ್ತಖಿ ಅವರ ಭೇಟಿಯು ಮುಂದಿನ ದಿನಗಳಲ್ಲಿ ದಕ್ಷಿಣ ಏಷ್ಯಾ ವ್ಯಾಪ್ತಿಯ ರಾಜಕೀಯವನ್ನು ಗಮನಾರ್ಹವಾಗಿ ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದ ನೆರೆಹೊರೆಯ ಭೂರಾಜಕೀಯದ ಸಮೀಕರಣಗಳು 180 ಡಿಗ್ರಿಗೆ ತಿರುಗಲು ಮೂರು ದಶಕಗಳೇ ಬೇಕಾದವು. ಆಗ ಇದ್ದದ್ದು ಸಂಪೂರ್ಣ ದ್ವೇಷ ಭಾವನೆ. ಈಗ ಅದು ನವದೆಹಲಿ ಮತ್ತು ಕಾಬುಲ್ ನಡುವೆ ನಿಕಟ ಸ್ನೇಹಕ್ಕೆ ತಿರುಗಿದೆ. ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವೆ ಆಗ ಇದ್ದುದು ಮಾರ್ಗದರ್ಶಕ ಸಂಬಂಧ. ಈಗದು ಬಹುತೇಕ ವೈರತ್ವಕ್ಕೆ ತಿರುಗಿದೆ. ಸೋವಿಯತ್ ಒಕ್ಕೂಟ ಆಫ್ಘಾನಿಸ್ತಾನದ ಮೇಲೆ ಆಕ್ರಮಣ ಮಾಡಿದಾಗ ಪಾಕಿಸ್ತಾನದಲ್ಲಿ ಮೊಳಕೆಯೊಡೆದಿದ್ದು ತಾಲಿಬಾನ್. ಅದು ಪಾಕಿಸ್ತಾನದ ನೆರವಿನೊಂದಿಗೇ ಅಧಿಕಾರದ ಸೂತ್ರ ಹಿಡಿದಿದ್ದು 1996ರಲ್ಲಿ. ಅದಾಗಿ ಮೂರು ವರ್ಷಗಳ ಬಳಿಕ ಸಂಭವಿಸಿದ ಕಂದಹಾರ್ ವಿಮಾನ ಅಪಹರಣ ತಾಲಿಬಾನ್ ಮತ್ತು ಪಾಕಿಸ್ತಾನದ ನಡುವೆ ಎಷ್ಟು ನಿಕಟ ಸಂಬಂಧವಿತ್ತು ಎಂಬುದಕ್ಕೆ ಸಾಕ್ಷಿಯಾಗಿತ್ತು. ಅಪಹರಣಗೊಂಡ ವಿಮಾನದಲ್ಲಿ ಒತ್ತೆಯಾಳುಗಳಾಗಿದ್ದ ಪ್ರಯಾಣಿಕರನ್ನು ಬಿಡುಗಡೆ ಮಾಡಲು ಅಂದಿನ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಕಾಶ್ಮೀರದ ಜೈಲಿನಲ್ಲಿದ್ದ ಮಸೂದ್ ಅಝರ್, ಸಯೀದ್ ಶೇಖ್ ಮತ್ತು ಮುಸ್ತಾಕ್ ಅಹ್ಮದ್ ಝರ್ಗಾರ್-ನನ್ನು ಬಿಡುಗಡೆ ಮಾಡುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಯಿತು.

9/11 ದಾಳಿಯ ಬಳಿಕ ಪಾಕಿಸ್ತಾನ ಮತ್ತು ತಾಲಿಬಾನ್ ನಡುವಿನ ಸಂಬಂಧ ಹದಗೆಟ್ಟು ಹೋಯಿತು. ಅಮೆರಿಕ ನೇತೃತ್ವದ ಪಡೆಗಳು ಅಫ್ಘಾನಿಸ್ತಾನವನ್ನು ತಮ್ಮ ವಶಕ್ಕೆ ತೆಗೆದುಕೊಂಡವು. ಆಗ ಅಮೆರಿಕದ ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯು ಬುಶ್ ಅವರ ಆಡಳಿತದ ತೀವ್ರ ಒತ್ತಡಕ್ಕೆ ಮಣಿದ ಆಗಿನ ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ತಮ್ಮದೇ ದೇಶದಲ್ಲಿ ಆಶ್ರಯ ಪಡೆದ ತಾಲಿಬಾನ್ ಮತ್ತು ಅಲ್-ಖೈದಾ ಉಗ್ರರನ್ನು ಸೆದೆಬಡಿಯಬೇಕಾಯಿತು. ಇದರ ಜೊತೆ ಜೊತೆಗೇ ಪಾಕಿಸ್ತಾನದ ಗುಪ್ತಚರ ಸಂಸ್ಥೆ-ಐಎಸ್‌ಐ ಮತ್ತು ದೇಶದ ಮಿಲಿಟರಿ ತಾಲಿಬಾನ್-ಗೆ ಖುಲ್ಲಂಖುಲ್ಲ ಬೆಂಬಲ ನೀಡುತ್ತ, ಹತ್ತಾರು ವಿಧಗಳಲ್ಲಿ ನೆರವು ಬಂದದ್ದು ಗುಟ್ಟಾಗಿ ಉಳಿಯಲಿಲ್ಲ. ತಾಲಿಬಾನ್ ಮತ್ತು ಮಿಲಿಟರಿ ಎರಡನ್ನು ಸಂತೋಷಪಡಿಸುವ ಭರದಲ್ಲಿ ಪಾಕಿಸ್ತಾನ ಅಮೆರಿಕ ಮತ್ತು ಕಾಬುಲ್ ನಲ್ಲಿರುವ ಅಮೆರಿಕ ನಿಯಂತ್ರಿತ ಸರ್ಕಾರದ ವಿರೋಧ ಕಟ್ಟಿಕೊಂಡಿತು.

Category
ಕರಾವಳಿ ತರಂಗಿಣಿ