image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಇಸ್ರೇಲ್‌ ಸೇನೆಯಿಂದ ಗಾಜಾದ ಹಲವೆಡೆ ದಾಳಿ

ಇಸ್ರೇಲ್‌ ಸೇನೆಯಿಂದ ಗಾಜಾದ ಹಲವೆಡೆ ದಾಳಿ

ಟೆಲ್‌ ಅವೀವ್‌: ಡೊನಾಲ್ಡ್‌ ಟ್ರಂಪ್‌ ನಿಲ್ಲಿಸಿದ್ದ ಇಸ್ರೇಲ್‌-ಗಾಜಾ ಯುದ್ಧ 9 ದಿನದಲ್ಲೆ ಮತ್ತೆ ಶುರುವಾಗಿದೆ. 2-3 ವರ್ಷಗಳಿಂದ ನಡೆಯುತ್ತಿದ್ದ ಯುದ್ಧವನ್ನು ಟ್ರಂಪ್‌ ಮಧ್ಯಸ್ಥಿಕೆಯಲ್ಲಿ ನಿಲ್ಲಿಸಲಾಗಿತ್ತು. ಆದರೆ ರವಿವಾರ ಇಸ್ರೇಲ್‌ ಸೇನೆಯು ಗಾಜಾದ ಹಲವೆಡೆ ದಾಳಿ ನಡೆಸಿದೆ. ಈ ವೇಳೆ 11ಕ್ಕೂ ಅಧಿಕ ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ರಾಫಾ ಪಟ್ಟಣ ಸೇರಿ ದಕ್ಷಿಣ ಗಾಜಾದ ಹಲವೆಡೆ ವೈಮಾನಿಕ ದಾಳಿ ನಡೆಸಲಾಗಿದೆ ಸ್ವತಃ ಇಸ್ರೇಲ್‌ ಸೇನೆಯೇ ಹೇಳಿಕೊಂಡಿದೆ. ಇಸ್ರೇಲ್‌ ವಾಯು ದಾಳಿ ನಡೆಸಿದ್ದು, ಇದಕ್ಕೂ ಮೊದಲು ಹಮಾಸ್‌ ದಾಳಿ ನಡೆಸಿತ್ತು ಎಂದು ಇಸ್ರೇಲ್‌ ಹೇಳಿಕೊಂಡಿದೆ. ಗಾಜಾದ ರಾಫಾ ಪ್ರದೇಶವು ಇನ್ನೂ ಇಸ್ರೇಲ್‌ ನಿಯಂತ್ರಣದಲ್ಲೇ ಇದ್ದು, ಈ ಪ್ರದೇಶದಲ್ಲಿ ಹಮಾಸ್‌ ಸಂಘಟನೆಯು ಇಸ್ರೇಲ್‌ ಸೇನಾ ತುಕಡಿ ಮೇಲೆ ದಾಳಿ ನಡೆಸಿದೆ ಎಂದು ಇಸ್ರೇಲ್‌ ಆರೋಪಿಸಿದೆ.

ಜತೆಗೆ ಸೇನೆಯ ಮೇಲಿನ ದಾಳಿಗೆ ಪ್ರತಿಯಾಗಿ ಹಮಾಸ್‌ ಮೇಲೆ ವಾಯುದಾಳಿ ನಡೆಸಿರುವುದಾಗಿಯೂ ಸಮರ್ಥಿಸಿಕೊಂಡಿದೆ. ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಸೇನಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಕದನ ವಿರಾಮದ ಉಲ್ಲಂಘನೆಯಾದ ಪಕ್ಷದಲ್ಲಿ ಕಠಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ ಅಧಿಕೃತವಾಗಿ ಯುದ್ಧಕ್ಕೆ ಮರಳಿರುವ ಬಗ್ಗೆ ಇಸ್ರೇಲ್‌ ಮಾಹಿತಿ ನೀಡಿಲ್ಲ. ಆದರೆ ಗಾಜಾ, ಈಜಿಪ್ಟ್ ನಡುವಿನ ಗಡಿ ದಾಟುವ ರಾಫಾದ ಮಾರ್ಗವನ್ನು ಅನಿರ್ದಿಷ್ಟಾವಧಿವರೆಗೂ ನಿರ್ಬಂಧಿಸುವುದಾಗಿ ಇಸ್ರೇಲ್‌ ಎಚ್ಚರಿಸಿದೆ. ಇತ್ತ ದಾಳಿಯ ಬಗೆಗಿನ ಇಸ್ರೇಲ್‌ ಆರೋಪಗಳನ್ನು ಹಮಾಸ್‌ ಸಂಘಟನೆ ತಳ್ಳಿಹಾಕಿದೆ. ಹಮಾಸ್‌ ಸಂಘಟನೆಯ ಸಶಸ್ತ್ರ ವಿಭಾಗವಾದ ಖಾಸ್ಸಮ್‌ ಬ್ರಿಗೇಡ್‌ ಈ ಬಗ್ಗೆ ಪ್ರತಿಕ್ರಿಯಿಸಿದ್ದು, "ಕದನ ವಿರಾಮದ ಎಲ್ಲ ನಿಯಮಗಳನ್ನು ನಾವು ಪಾಲಿಸುತ್ತಿದ್ದೇವೆ. ರಾಫಾದಲ್ಲಿ ನಡೆಯುತ್ತಿರುವ ದಾಳಿ ಅಥವಾ ಸಂಘರ್ಷದ ಬಗ್ಗೆ ಮಾಹಿತಿಯೂ ಇಲ್ಲ, ಸಂಬಂಧವೂ ಇಲ್ಲ' ಎಂದು ಹೇಳಿದೆ.

Category
ಕರಾವಳಿ ತರಂಗಿಣಿ