ಗಾಜಾ: ಮಾನವರ ರಕ್ತದ ರುಚಿ ಕಂಡಿರುವ ಪ್ಯಾಲೆಸ್ಟೈನ್ ಭಯೋತ್ಪಾದಕ ಸಂಘಟನೆ ಹಮಾಸ್, ಇಸ್ರೇಲ್ ಜೊತೆಗಿನ ಸಂಘರ್ಷ ಕೊನೆಗೊಂಡ ಮೇಲೆ ತನ್ನ ಬಂದೂಕುಗಳನ್ನು ಗಾಜಾ ಜನರತ್ತ ತಿರುಗಿಸಿದೆ. ಅಮಾಯಕ ಮತ್ತು ನಿರಾಯುಧ ಗಾಜಾ ಜನರನ್ನು ಅತ್ಯಂತ ಭೀಕರವಾಗಿ ಕೊಲ್ಲಲು ಶುರು ಮಾಡಿರುವ ಹಮಾಸ್, 8 ಜನರನ್ನು ಸಾರ್ವಜನಿಕವಾಗಿ ಅತ್ಯಂತ ಭೀಕರವಾಗಿ ಕೊಲೆ ಮಾಡಿದೆ. ಗಾಜಾ ಮೇಲೆ ತನ್ನ ನಿಯಂತ್ರಣವನ್ನು ದೃಢಪಡಿಸಲು ಹಿಂಸಾಚಾರದ ಮೊರೆ ಹೋಗಿರುವ ಹಮಾಸ್, ಸಾರ್ವಜನಿಕವಾಗಿ 8 ಜನರನ್ನು ಗುಂಡಿಕ್ಕಿ ಕೊಲೆ ಮಾಡಿದೆ. ಈ ಘೋರ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಹಮಾಸ್‌ನ ರಕ್ತದಾಹದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇಸ್ರೇಲ್-ಹಮಾಸ್ ಕದನ ವಿರಾಮ ಒಪ್ಪಂದ ಜಾರಿಯಾದ ಮೇಲೆ, ಪ್ಯಾಲೆಸ್ಟೈನ್ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸಲು ಹಮಾಸ್ ಮತ್ತು ಇತರ ಸಶಸ್ತ್ರ ಗುಂಪುಗಳ ನಡುವೆ ಸಂಘರ್ಷ ಆರಂಭವಾಗಿದೆ. ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿರುವ ಹಮಾಸ್, ತನ್ನ ಕ್ರೌರ್ಯದ ಪ್ರದರ್ಶನವನ್ನು ಈಗ ಗಾಜಾ ಜನರ ಮೇಲೆ ಮಾಡುತ್ತಿದೆ.
ಹಮಾಸ್‌ನ ಅನಾಗರಿಕ ವರ್ತನೆಯನ್ನು ಸಾಬೀತುಪಡಿಸುವ ವಿಡಿಯೋದಲ್ಲಿ, ವಿದ್ರೋಹದ ಆರೋಪದ ಮೇಲೆ 8 ಜನರನ್ನು ಸಾರ್ವಜನಿಕವಾಗಿ ಅಮಾನವೀಯವಾಗಿ ಗುಂಡಿಕ್ಕಿ ಕೊಲ್ಲುವ ದೃಶ್ಯಗಳು ಸೆರೆಯಾಗಿವೆ. ಹಮಾಸ್ ಇವರಿಗೆ ಇಸ್ರೇಲ್ ಬೆಂಬಲಿಗರು ಎಂಬ ಹಣೆಪಟ್ಟಿ ಕಟ್ಟಿದ್ದು, ತನ್ನ ಕುಕೃತ್ಯವನ್ನು ಸಮರ್ಥಿಸಿಕೊಂಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗಾಜಾ ಶಾಂತಿ ಯೋಜನೆ ಯಶಸ್ಸು ಕಂಡಿದೆ. ಸರ್ವನಾಶದ ಭಯದಿಂದ ಹಮಾಸ್ ಈ ಶಾಂತಿ ಯೋಜನೆಗೆ ಒಪ್ಪಿಗೆ ಸೂಚಿಸಿದೆ. ಈಗಾಗಲೇ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿರುವ ಹಮಾಸ್, ಗಾಜಾ ಪಟ್ಟಿಯ ಮೇಲೆ ತನ್ನ ನಿಯಂತ್ರಣವನ್ನು ಸಾಬೀತುಪಡಿಸಲು ಹಿಂಸಾಚಾರವನ್ನು ಆರಂಭಿಸಿದೆ. ಗಾಜಾ ಪಟ್ಟಿಯ ಮೇಲೆ ಕಳೆದ 18 ವರ್ಷಗಳಿಂದ ಹಮಾಸ್‌ನ ನಿಯಂತ್ರಣವಿದೆ. ಕೆಲವು ಸಣ್ಣಪುಟ್ಟ ಸಶಸ್ತ್ರ ಗುಂಪುಗಳು ಹಮಾಸ್ ವಿರುದ್ಧ ಘರ್ಷಣೆಗೆ ಇಳಿಯುತ್ತವೆಯಾದರೂ, ಹಮಾಸ್ ಈ ವಿದ್ರೋಹವನ್ನು ನಿರ್ದಯವಾಗಿ ಹತ್ತಿಕ್ಕುತ್ತದೆ. ತನ್ನ ವಿರುದ್ಧ ಧ್ವನಿ ಎತ್ತುವರರಿಗೆ ಇಸ್ರೇಲ್ ಬೆಂಬಲಿಗರು ಎಂಬ ಹಣೆಪಟ್ಟಿ ಕಟ್ಟುವ ಹಮಾಸ್, ಅಂತಹವರನ್ನು ಸಾರ್ವಜನಿಕವಾಗಿ ಮರಣದಂಡನೆ ಶಿಕ್ಷೆಗೆ ಗುರಿಪಡಿಸುವ ಮೂಲಕ ತನ್ನ ಕ್ರೌರ್ಯವನ್ನು ಮೆರೆಯುತ್ತದೆ.