image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಗಾಜಾಗೆ ವಾಪಸಾಗುತ್ತಿರುವ ಪ್ಯಾಲೆಸ್ತೀನ್‌ ನಿರಾಶ್ರಿತರು...

ಗಾಜಾಗೆ ವಾಪಸಾಗುತ್ತಿರುವ ಪ್ಯಾಲೆಸ್ತೀನ್‌ ನಿರಾಶ್ರಿತರು...

ಗಾಜ : ಅಮೆರಿಕದ ಮಧ್ಯಸ್ಥಿಕೆಯಲ್ಲಿ ಇಸ್ರೇಲ್‌ ಮತ್ತು ಹಮಾಸ್‌ ನಡುವೆ ಕದನ ವಿರಾಮ ಏರ್ಪಟ್ಟ ಬೆನ್ನಲ್ಲೇ ಕಳೆದೆರಡು ವರ್ಷಗಳ ಸುದೀರ್ಘ ಸಂಘರ್ಷದಿಂದಾಗಿ ಮನೆ-ಮಠ ತೊರೆದಿದ್ದ ಸಾವಿರಾರು ಪ್ಯಾಲೆಸ್ತೀನೀಯರು ಇದೀಗ ಅವಶೇಷಗಳ ನಗರಗಳಂತಾಗಿರುವ ಗಾಜಾ ಪಟ್ಟಿಗೆ ವಾಪಸಾಗಲು ಆರಂಭಿಸಿದ್ದಾರೆ. 2023ರಲ್ಲಿ ಇಸ್ರೇಲ್‌ ಮೇಲೆ ಪೈಶಾಚಿಕ ದಾಳಿ ನಡೆಸಿದ್ದ ಹಮಾಸ್‌ 1200 ಕ್ಕೂ ಹೆಚ್ಚು ಮಂದಿಯನ್ನು ಹತ್ಯೆ ಮಾಡಿ, 250ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿತ್ತು. ಇದರ ಬೆನ್ನಲ್ಲೇ ಹಮಾಸ್‌ ವಿರುದ್ಧ ಕಾರ್ಯಾಚರಣೆ ಆರಂಭಿಸಿದ ಇಸ್ರೇಲ್‌ 67 ಸಾವಿರ ಜನರನ್ನು ಸಾಯಿಸಿ ಗಾಜಾವನ್ನು ಸಂಪೂರ್ಣವಾಗಿ ನಾಶಮಾಡಿದೆ. ಸಂಘರ್ಷದ ಹಿನ್ನೆಲೆಯಲ್ಲಿ ಶೇ.90ರಷ್ಟು ಗಾಜಾನಿವಾಸಿಗಳು ಮನೆ ತೊರೆದಿದ್ದರು. ಇಸ್ರೇಲ್‌ ಪ್ರಕಾರ ಹಮಾಸ್‌ ಒತ್ತೆಯಾಳಾಗಿ ಇರಿಸಿಕೊಂಡಿರುವ 48 ಮಂದಿಯಲ್ಲಿ 20 ಮಂದಿ ಇನ್ನೂ ಜೀವಂತವಾಗಿದ್ದಾರೆ. ಸೋಮವಾರದ ವೇಳೆ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್‌ ಕೂಡ ಬಂಧನದಲ್ಲಿಸಿರುವ 2 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ತೀನಿಯರನ್ನು ಬಿಡುಗಡೆ ಮಾಡಲಿದೆ. ಇದಕ್ಕೆ ಪೂರ್ವಭಾವಿಯಾಗಿ ಇಸ್ರೇಲ್ ಶುಕ್ರವಾರ ಕದನವಿರಾಮ ಸಾರಿದ್ದು, ಅಂದಿನಿಂದಲೇ ಬಾಂಬ್‌ಗಳ ಮೊರೆತ ನಿಂತಿದೆ. ಈ ನಡುವೆ, ಗಾಜಾ ನಿರಾಶ್ರಿತರಿಗೆ ಆಹಾರ ಮತ್ತಿತರ ಅಗತ್ಯ ವಸ್ತುಗಳ ನೆರವು ಪೂರೈಕೆ ಆರಂಭವಾಗಿದೆ.

ಈಗಾಗಲೇ 1.70 ಲಕ್ಷ ಮೆಟ್ರಿಕ್‌ ಟನ್‌ ಆಹಾರ ಸೇರಿದಂತೆ ಅಗತ್ಯ ವಸ್ತುಗಳು ಜೋರ್ಡಾನ್‌ ಮತ್ತು ಈಜಿಸ್ಟ್‌ನಲ್ಲಿ ಸಂಗ್ರಹಿಸಿಡಲಾಗಿದ್ದು, ಇಸ್ರೇಲ್‌ನಿಂದ ಅವುಗಳ ಪೂರೈಕೆಗೆ ಒಪ್ಪಿಗೆ ಸಿಗುತ್ತಿದ್ದಂತೆ ಸಾಗಣೆ ಕಾರ್ಯ ಆರಂಭವಾಗಲಿದೆ ಎಂದು ಹೇಳಲಾಗಿದೆ. ನೆತನ್ಯಾಹು ಅವರು ಈಗಾಗಲೇ ಮೊದಲ ಹಂತದಲ್ಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು, ನಂತರ ಹಮಾಸ್‌ ಶಸ್ತ್ರತ್ಯಜಿಸಬೇಕು. ಆ ಬಳಿಕ ಗಾಜಾದಲ್ಲಿ ಸೇನೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಗಾಜಾದಿಂದ ಶೇ.50ರಷ್ಟು ಸೇನೆ ವಾಪಸ್‌ ಪಡೆಯಲು ಇಸ್ರೇಲ್‌ ನಿರ್ಧರಿಸಿದ್ದು, ಉಳಿದ ಶೇ.50ರಷ್ಟು ಸೇನೆಯನ್ನು ಹಮಾಸ್‌ ಒಪ್ಪಂದಕ್ಕೆ ಬದ್ಧವಾದ ನಂತರ ಹಿಂತೆಗೆದುಕೊಳ್ಳುವುದಾಗಿ ತಿಳಿಸಿದೆ.ಇಸ್ರೇಲ್‌ ದಾಳಿಯಿಂದಾಗಿ 67 ಸಾವಿರಕ್ಕೂ ಹೆಚ್ಚು ಮಂದಿ ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ. 1.70 ಲಕ್ಷ ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಇದೀ ಅವರೆಲ್ಲ ವಾಪಸಾಗುತ್ತಿದ್ದು, ನೆಲೆ ಇಲ್ಲದೆ ಕಂಗಾಲಾಗಿದ್ದಾರೆ.

Category
ಕರಾವಳಿ ತರಂಗಿಣಿ