ವಿಶ್ವಸಂಸ್ಥೆ : ಈಜಿಪ್ಟ್‌ನ ಮಾಜಿ ಸಚಿವ ಖಲೀದ್ ಎಲ್-ಎನಾನಿಯವರನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಏಜೆನ್ಸಿಯ(ಯುನೆಸ್ಕೋ) ಮುಂದಿನ ಮುಖ್ಯಸ್ಥರನ್ನಾಗಿ ನೇಮಿಸಲು ಯುನೆಸ್ಕೋ ಕಾರ್ಯನಿರ್ವಾಹಕ ಮಂಡಳಿ ಮತ ಚಲಾಯಿಸಿದೆ. ನಾಲ್ಕು ವರ್ಷಗಳ ಎರಡು ಅವಧಿ ಪೂರೈಸಿದ ನಿರ್ಗಮಿತ ಪ್ರಧಾನ ನಿರ್ದೇಶಕಿ ಆಡ್ರೆ ಅಜೌಲೆ ಅವರ ಸ್ಥಾನದಲ್ಲಿ ಖಲೀದ್ ಎಲ್-ಎನಾನಿ(54 ವರ್ಷ) ಯವರನ್ನು ಆಯ್ಕೆ ಮಾಡಲು ಕಾರ್ಯನಿರ್ವಾಹಕ ಮಂಡಳಿ ತೀರ್ಮಾನಿಸಿದೆ. 57 ಸದಸ್ಯರಲ್ಲಿ 55 ಮಂದಿ ಖಲೀದ್ ಪರ ಮತ ಚಲಾಯಿಸಿದ್ದಾರೆ. ಇದೀಗ ಯುನೆಸ್ಕೋದ ಸಾಮಾನ್ಯ ಸಭೆ ಈ ಆಯ್ಕೆಯನ್ನು ಅನುಮೋದಿಸಿದರೆ ಖಲೀದ್ ನವೆಂಬರ್ 14ರಂದು ಅಧಿಕಾರ ಸ್ವೀಕರಿಸಲಿದ್ದಾರೆ ಮತ್ತು ಯುನೆಸ್ಕೋದ ಪ್ರಧಾನ ನಿರ್ದೇಶಕರಾದ ಅರಬ್ ದೇಶದ ಪ್ರಥಮ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ. ಯುನೆಸ್ಕೋದಿಂದ ನಿರ್ಗಮಿಸುವುದಾಗಿ ಘೋಷಿಸಿರುವ ಅಮೆರಿಕಾ ಮತದಾನದಲ್ಲಿ ಪಾಲ್ಗೊಳ್ಳಲಿಲ್ಲ.