ನವದೆಹಲಿ : ಭಾರತ ಮತ್ತು ಚೀನಾ ನಡುವೆ ಆಮದು ಮತ್ತು ರಫ್ತು ಅಂತರ ಬಹಳ ಗಣನೀಯವಾಗಿ ಇದೆ. ಚೀನಾದೊಂದಿಗೆ ಮುಕ್ತವಾಗಿ ವ್ಯಾಪಾರ ಮಾಡಲು ಭಾರತಕ್ಕೆ ಭಯ ಇರುವುದು ಇದೇ ಕಾರಣಕ್ಕೆ. ಇದೇ ವೇಳೆ, ಚೀನಾ ತಾನು ಭಾರತದಿಂದ ಹೆಚ್ಚು ಸರಕುಗಳನ್ನು ಖರೀದಿಸಲು ಸಿದ್ಧ ಇರುವುದಾಗಿ ಹೇಳಿದೆ. ಆದರೆ, ಅದಕ್ಕೆ ಒಂದು ಷರತ್ತನ್ನೂ ಸೇರಿಸಿದೆ. ಚೀನಾದ ಮಹತ್ವಾಕಾಂಕ್ಷಿ ವ್ಯಾಪಾರ ಕೂಟವಾದ ಆರ್ಸಿಇಪಿಯನ್ನು (RCEP- Regional Comprehensive Economic Partnership) ಭಾರತ ಸೇರಬೇಕು ಎನ್ನುವುದು ಅದರ ಷರತ್ತು. ಚೀನಾದ ಸೆಂಟರ್ ಫಾರ್ ಇಂಟರ್ನ್ಯಾಷನಲ್ ಫೈನಾನ್ಸ್ ಸ್ಟಡೀಸ್ನ ನಿರ್ದೇಶಕ ಹಾಗೂ ಆರ್ಥಿಕ ತಜ್ಞ ಲಿಖಿಂಗ್ ಝಾಂಗ್ (Liqing Zhang) ಅವರು ಈ ಮಾತು ಹೇಳಿದ್ದಾರೆ. ಕೌಟಿಲ್ಯ ಎಕನಾಮಿಕ್ಸ್ ಕಾಂಕ್ಲೇವ್ ಕಾರ್ಯಕ್ರಮದ ವೇಳೆ ಎಕನಾಮಿಕ್ ಟೈಮ್ಸ್ ಜತೆ ಮಾತನಾಡುತ್ತಿದ್ದ ಝಾಂಗ್, ಭಾರತವು ಆರ್ಸಿಇಪಿಗೆ ಸೇರಿದರೆ ಅದರ ಸರಕುಗಳು ಮುಕ್ತಾವಕಾಶ ಪಡೆಯುತ್ತವೆ ಎಂದಿದ್ದಾರೆ. ಭಾರತವು ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್ಸಿಇಪಿ) ಸೇರ್ಪಡೆಯಾದರೆ ಅದರ ಸರಕುಗಳ ಮೇಲಿನ ಸುಂಕಗಳು ಒಂದು ದಶಕದಲ್ಲೇ ಸೊನ್ನೆಗೆ ಬರುತ್ತವೆ. ಇದರಿಂದ ಅದರ ಸರಕುಗಳು ಹೆಚ್ಚು ಸ್ಪರ್ಧಾತ್ಮಕವಾಗುತ್ತವೆ ಎಂದು ಚೀನಾದ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆರ್ಸಿಇಪಿ ಎಂಬುದು ವಿವಿಧ ದೇಶಗಳು ಸೇರಿ ಮಾಡಿಕೊಂಡಿರುವ ಮುಕ್ತ ವ್ಯಾಪಾರ ಒಪ್ಪಂದ. ಮೂಲತಃ ಇದು ಏಷ್ಯಾ ಪೆಸಿಫಿಕ್ ದೇಶಗಳನ್ನು ಒಳಗೊಂಡಿದೆ. ಅಸಿಯನ್ ರಾಷ್ಟ್ರಗಳಾದ ಕಾಂಬೋಡಿಯಾ, ಇಂಡೋನೇಷ್ಯಾ, ಲಾವೋಸ್, ಮಲೇಷ್ಯಾ, ಮಯನ್ಮಾರ್, ಥಾಯ್ಲೆಂಡ್ ಮೊದಲಾದವು ಸೇರಿವೆ. ಏಷ್ಯನ್ ದೈತ್ಯ ಶಕ್ತಿಯಾದ ಚೀನಾ ಇದೆ. ಪೆಸಿಫಿಕ್ ರಾಷ್ಟ್ರಗಳಾದ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮೊದಲಾದವಿವೆ. 2011ರಲ್ಲಿ ಆರ್ಸಿಇಪಿ ಯೋಜನೆ ಪ್ರಸ್ತಾಪ ಆಗಿದ್ದು. 2012ರಲ್ಲಿ ಅಸಿಲಿಯನ್ ಶೃಂಗಸಭೆಯಲ್ಲಿ ಇದು ಶುರುವಾಯಿತು. 2020ರಲ್ಲಿ ವಿವಿಧ ದೇಶಗಳು ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಆರ್ಸಿಇಪಿ ಅಧಿಕೃತವಾಗಿ ಕಾರ್ಯಾರಂಭಗೊಂಡಿತು. ಆರಂಭದಲ್ಲಿ ಭಾರತವೂ ಈ ಕೂಟಕ್ಕೆ ಸೇರಲು ಯತ್ನಿಸಿತ್ತು. ಆದರೆ, ಚೀನಾ ಈ ಕೂಟದಲ್ಲಿ ಪ್ರಾಬಲ್ಯ ಹೊಂದಿರುವುದು, ಹಾಗೂ ಆ ದೇಶವು ಭಾರತದ ಮೇಲೆ ಗಡಿ ಸಂಘರ್ಷ ಮಾಡುತ್ತಿದ್ದುದು, ಆರ್ಸಿಇಪಿಯಿಂದ ಭಾರತ ಸಂಪೂರ್ಣ ವಿಮುಖಗೊಂಡಿತು. ಆರ್ಸಿಇಪಿ ಒಪ್ಪಂದಕ್ಕೆ 15 ದೇಶಗಳು ಸಹಿ ಹಾಕಿವೆ. ವಿಶ್ವದ ಶೇ. 30ರಷ್ಟು ಜಿಡಿಪಿಯನ್ನು ಈ ದೇಶಗಳು ಹೊಂದಿವೆ. ವಿಶ್ವದ ಶೇ. 30ರಷ್ಟು ಜನಸಂಖ್ಯೆಯೂ ಈ ದೇಶಗಳಲ್ಲಿವೆ. ಈ ಒಪ್ಪಂದದ ಪ್ರಕಾರ ಸದಸ್ಯ ದೇಶಗಳ ನಡುವಿನ ವ್ಯಾಪಾರದಲ್ಲಿ ಶೇ. 90ರಷ್ಟು ಸುಂಕಗಳನ್ನು ನಿವಾರಿಸಲಾಗುತ್ತದೆ. ಸಂಪೂರ್ಣ ಸುಂಕ ರಹಿತ ವ್ಯಾಪಾರ ನಡೆಸುವಂತಾಗಬೇಕು ಎಂಬುದು ಗುರಿ.