ವಾಷಿಂಗ್ಟನ್: ಹಮಾಸ್ ನಾಯಕರನ್ನು ಗುರಿಯಾಗಿಸಿ ದೋಹಾದ ಮೇಲೆ ನಡೆಸಿದ ದಾಳಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸೋಮವಾರ ಕತಾರ್‌ನ ಕ್ಷಮೆಯಾಚಿಸಿದ್ದಾರೆ ಎಂದು ಅಮೆರಿಕ ತಿಳಿಸಿದೆ. 'ನೆತನ್ಯಾಹು ಅವರು ಶ್ವೇತಭವನದಿಂದ ದೂರವಾಣಿ ಕರೆ ಮಾಡಿ ಕತಾರ್ ಪ್ರಧಾನಿ ಮೊಹಮ್ಮದ್ ಬಿನ್ ಅಬ್ದುಲ್‌ರಹಮಾನ್ ಅಲ್ ಥಾನಿ ಅವರ ಕ್ಷಮೆಯಾಚಿಸಿದರು. ದಾಳಿಯಲ್ಲಿ ಕತಾರ್‌ನ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿದರು. ಭವಿಷ್ಯದಲ್ಲಿ ಇಂತಹ ದಾಳಿ ನಡೆಸುವುದಿಲ್ಲ ಎಂದು ಮಾತುಕೊಟ್ಟರು' ಎಂದು ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಸ್ರೇಲ್ ಸೆಪ್ಟೆಂಬರ್ 9ರಂದು ದೋಹಾ ಮೇಲೆ ನಡೆಸಿದ ದಾಳಿಯಲ್ಲಿ ತನ್ನ ಐವರು ಸದಸ್ಯರು ಮೃತಪಟ್ಟಿದ್ದಾರೆ ಎಂದು ಹಮಾಸ್ ಹೇಳಿತ್ತು. ಈ ದಾಳಿಯನ್ನು ಅಮೆರಿಕ ಕೂಡಾ ಖಂಡಿಸಿತ್ತು. ಗಾಜಾದಲ್ಲಿ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೆತನ್ಯಾಹು ಜತೆ ಸೋಮವಾರ ಶ್ವೇತಭವನದಲ್ಲಿ ಮಾತುಕತೆ ನಡೆಸಿದರು. ಯುದ್ಧ ಕೊನೆಗೊಳಿಸಲು ಇಸ್ರೇಲ್ ಮೇಲೆ ಒತ್ತಡ ಹೆಚ್ಚುತ್ತಿರುವ ಸಂದರ್ಭದಲ್ಲೇ ಇವರ ಭೇಟಿ ನಡೆದಿದೆ. ಗಾಜಾದಲ್ಲಿ ಯುದ್ಧವನ್ನು ಕೊನೆಗೊಳಿಸುವ 'ಸಂಪೂರ್ಣ ವಿಶ್ವಾಸವಿದೆ' ಎಂದು ಟ್ರಂಪ್ ಅವರು ಮಾತುಕತೆಗೂ ಮುನ್ನ ಸುದ್ದಿಗಾರರಿಗೆ ತಿಳಿಸಿದರು. ಅಮೆರಿಕವು ಮುಂದಿಟ್ಟಿರುವ 21 ಅಂಶಗಳ ಕದನ ವಿರಾಮ ಪ್ರಸ್ತಾವವನ್ನು ಎರಡೂ ಕಡೆಯವರು (ಇಸ್ರೇಲ್-ಹಮಾಸ್) ಒಪ್ಪಿಕೊಳ್ಳುವರೇ ಎಂಬ ಪ್ರಶ್ನೆಗೆ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.